ಚಿಲಿ -
ದಕ್ಷಿಣ ಅಮೆರಿಕದಲ್ಲಿ ಪೆಸಿಫಿಕ್ ಕರಾವಳಿಯಲ್ಲಿರುವ ಒಂದು ದೇಶ. ಉತ್ತರಕ್ಕೆ ಪೆರು, ಪೂರ್ವಕ್ಕೆ ಬೊಲಿವಿಯ ಮತ್ತು ಆರ್ಜೆಂಟೀನ, ಪಶ್ಚಿಮಕ್ಕೆ ಪೆಸಿಫಿಕ್ ಸಾಗರ ಇವೆ. ದ.ಅ. 170 30' ನಿಂದ ದ. ಅ. 55ಔ 59' ವರೆಗೆ 2,650 ಮೈ. ಉದ್ದಕ್ಕೆ ಚಾಚಿರುವ ಈ ದೇಶದ ಸರಾಸರಿ ಅಗಲ ಕೇವಲ 110 ಮೈ. ಅಕ್ಷಾಂಶೀಯವಾಗಿ ಇಷ್ಟು ದೂರ ಹಬ್ಬಿರುವ, ಜನ ವಾಸವಿರುವ ದೇಶ ಪ್ರಪಂಚದಲ್ಲಿ ಬೇರೆ ಯಾವುದೂ ಇಲ್ಲ. ಚಿಲಿಯ ವಿಸ್ತೀರ್ಣ 2,92,256 ಚ.ಮೈ. ದಕ್ಷಿಣ ಪೆಸಿಫಿಕ್ ಸಾಗರದ ವಾನ್ ಫರ್ನಾಂಡಿಸ್, ಈಸ್ಟರ್ ಮತ್ತು ಇತರ ಹಲವು ದ್ವೀಪಗಳು ಚಿಲಿಗೆ ಸೇರಿವೆ. ಚಿಲಿಯ ಜನಸಂಖ್ಯೆ 88,34,820(1970).

	ಭೂವಿಜ್ಞಾನ : ಚಿಲಿ ದೇಶ ಬಹುಕಾಲದಿಂದಲೂ ಭೂಕಂಪ ಮತ್ತು ಜ್ವಾಲಾಮುಖಿಗಳ ಹಾವಳಿ ತುತ್ತಾದ ಪ್ರದೇಶ. ಪೂರ್ವದ ಉದ್ದಕ್ಕೂ ಗಗನಚುಂಬೀ ಆಂಡೀಸ್ ಪರ್ವತಶ್ರೇಣಿ, ಪಶ್ಚಿಮತೀರದ ಉದ್ದಕ್ಕೂ ಅಷ್ಟೇ ಆಳವಾದ ಸಮುದ್ರ, ಹೀಗೆ ಅತಿ ಎತ್ತರ, ಅತಿ ಆಳ-ಇವೆರಡರ ಸೀಮಾಪ್ರದೇಶವೇ ಚಿಲಿ ದೇಶ. 16ನೆಯ ಶತಮಾನದಿಂದ ಈಚೆಗೆ ಇಲ್ಲಿ ಸಂಭವಿಸಿದ ಅನೇಕ ಭೂಕಂಪಗಳ ದಾಖಲೆ ಇದೆ. ಇವುಗಳ ಪೈಕಿ ಸುಮಾರು 100 ಬಲು ಭಯಂಕರ ಭೂಕಂಪಗಳು. ಇವುಗಳ ಹಾವಳಿ ಅಪಾರ. ಈ ಶತಮಾನದಲ್ಲೇ ತಲೆದೋರಿದ, 1906, 1928, 1939, 1960 ಹಾಗೂ 1973ರ, ಭೂಕಂಪಗಳ ಹಾವಳಿಯಂತೂ ಬಹು ಭಯಾನಕ.

	ದೇಶದ ಪಶ್ಚಿಮತೀರದ ಉದ್ದಕ್ಕೂ ಭೂ ಇತಿಹಾಸದ ಅತ್ಯಂತ ಪುರಾತನ ಯುಗಗಳ ಗ್ರಾನೈಟ್, ಪದರುಶಿಲೆ ಹಾಗೂ ಕ್ರಿಟೇಷನ್ ಮತ್ತು ಟರ್ಷಿಯರಿ ನಿಕ್ಷೇಪಗಳು ಇವೆ. ಒಳನಾಡಿನ ಪೂರ್ವದಿಕ್ಕಿನ ಉದ್ದಕ್ಕೂ ಆಂಡೀಸ್ ಪರ್ವತಶ್ರೇಣಿಯ ಪಶ್ಚಿಮಪಂಕ್ತಿ. ಇವೆರಡರ ನಡುವೆ ಇಡೀ ದೇಶದ ಉದ್ದಕ್ಕೂ ವ್ಯಾಪಿಸಿರುವ ಮಹಾ ತಗ್ಗು ಅಥವಾ ಕಣಿವೆ. ಆಂಡೀಸ್ ಪರ್ವತಪಂಕ್ತಿಯ ಜಾಡಿನಲ್ಲಿ ಅಂತಸ್ಸರಣಗಳು (ಇನ್‍ಟ್ರೂಸಿವ್ಸ್) ಜ್ವಾಲಾಮುಖಿ ಶಿಲಾನಿಕ್ಷೇಪಗಳು ಮತ್ತು ಮಡಿಕೆಬಿದ್ದಿರುವ ಮೀಸೋಜೋಯಿಕ್ ಶಿಲಾಸ್ತರಗಳಿವೆ. ಕಣಿವೆಯ ಭಾಗದಲ್ಲಿ ಪುರಾತನಶಿಲಾ ಕಣಗಳ ಸಂಗ್ರಹದಿಂದಾದ ನಿಕ್ಷೇಪಗಳಿದ್ದು ಹಲವೆಡೆ ಇವು 300' ಗಳಿಗೂ ಮೀರಿ ಮಂದವಾಗಿವೆ. ಉತ್ತರ ಚಿಲಿಯ ಆಂಟೊ ಫ್ಯಾಗಸ್ಟಾದ ದಕ್ಷಿಣಕ್ಕಿರುವ ಪುರಾತನ ಶಿಲೆಗಳು ಸಮುದ್ರಮಟ್ಟದಿಂದ ಬಹು ಎತ್ತರಕ್ಕೆ ಬೆಟ್ಟಗಳೋಪಾದಿ ವ್ಯಾಪಿಸಿವೆ. ಈ ಬೆಟ್ಟಗಳ ಜಾಡು ಹಾರ್ನ್ ಭೂಶಿರದವರೆಗೂ ಕಂಡುಬರುತ್ತದೆ. ದಕ್ಷಿಣ ಚಿಲಿಯ ಅನೇಕ ದ್ವೀಪಗಳ ಪೂರ್ತಿ ಇವೇ ವ್ಯಾಪಿಸಿವೆ. ಇವೆಲ್ಲ ಪೇಲಿಯೊಜೋಯಿಕ್ ಯುಗದ ಶಿಲಾಸ್ತರಗಳಿಂದ ಕೂಡಿದ್ದು ಅನೇಕ ಕಡೆ ಮಡಿಕೆ ಬಿದ್ದಿವೆ. ಉತ್ತರ ಚಿಲಿಯ ತೀರ ಪ್ರದೇಶದಲ್ಲಿರುವ ಕ್ರಿಟೇಷಸ್ ಮತ್ತು ಟರ್ಷಿಯರಿ ಶಿಲಾಸ್ತರಗಳು ಅಷ್ಟು ವಿಸ್ತಾರವಾಗಿಲ್ಲ. ಆದರೆ ದಕ್ಷಿಣ ಚಿಲಿಯ ಮೀಸೊಜೋಯಿಕ್ ಶಿಲಾಸ್ತರಗಳು ಬಹು ವಿಶಾಲಾವಾದ ಜಾಡಿನಲ್ಲಿ ಪ್ರಸರಿಸಿವೆ. ತೀರಪ್ರದೇಶದ ಟರ್ಷಿಯರಿ ಶಿಲಾಸ್ತರಶ್ರೇಣಿಯಲ್ಲಿ ಸಮುದ್ರಿಯ ಹಾಗೂ ನೆಲಪ್ರದೇಶಗಳಲ್ಲಿ ಉತ್ಪತ್ತಿಯಾದ ಶಿಲಾನಿಕ್ಷೇಪಗಳು ಕಾಣಬಹುದು. ಇವುಗಳಲ್ಲಿ ಬಹುಭಾಗ ಮಯೊಸೀನ್ ಅಥವಾ ಪ್ಲಿಯೊಸೀನ್ ಯುಗಕ್ಕೆ ಸೇರಿವೆ. ಟಿರ್ಷಿಡೆಲ್‍ಫ್ಯೂಗೋ ದ್ವೀಪದ ಇಡೀ ಉತ್ತರಾರ್ಧದ ಪ್ರಸ್ಥಭೂಮಿ ಮಟ್ಟಸವಾದ ಟರ್ಷಿಯರಿ ಶಿಲಾಸ್ತರಗಳಿಂದಾದುದು. ಚಿಲಿಯ ಆಂಡೀಸ್ ಪರ್ವತಶ್ರೇಣಿಯ ಉತ್ತರಭಾಗದಲ್ಲಿ ಜುರಾಸಿಕ್ ಹಾಗೂ ಕ್ರಿಟೇಷಸ್ ಕಾಲದ ಜಲಜಶಿಲಾಸ್ತರಗಳು ಮತ್ತು ಟರ್ಷಿಯರಿ ಯುಗದ ಬಹಿಸ್ಸರಣ ಶಿಲೆಗಳನ್ನು ಗುರುತಿಸಬಹುದು. ಪರ್ವತಶ್ರೇಣಿಯ ದಿಕ್ಕಿನಲ್ಲೇ ಹರಡಿರುವ ಮೀಸೋeóÉೂೀಯಿಕ್ ಯುಗದ ಶಿಲಾಸ್ತರಗಳು ಬೃಹದಾಕಾರದ ಅಮಾಂತರ ಮಡಿಕೆಗಳ ಶ್ರೇಣಿಯನ್ನೇ ನಿರ್ಮಿಸಿವೆ. ಇವನ್ನು ಭೇದಿಸಿಕೊಂಡು ಟರ್ಷಿಯರಿ ಗ್ರಾನೈಟ್ ಮತ್ತು ಇತರ ಅಗ್ನಿಶಿಲಾಸ್ವರೂಪಗಳಿವೆ. ಅಲ್ಲದೆ ಈಚಿನ ಭೂಯುಗಗಳ ಜ್ವಾಲಾಮುಖಿಕೂಪಗಳನ್ನೂ ನೋಡಬಹುದು. ಉತ್ತರ ಚಿಲಿಯ ಕೋಪಿಯಾಪೋ ಬಳಿ ಸಸ್ಯಾವಶೇಷಗಳಿಂದ ಕೂಡಿದ ಕಲ್ಲಿದ್ದಲ ಸ್ತರಗಳಿವೆ. ಇವು ಕಿರಿಯ ಟ್ರಯಾಸಿಕ್ ಯುಗದ ರ್ಹೇಟಿಕ್ ಕಾಲದವು. ದೇಶದ ಹಲವಾರು ಕಡೆ ಮೀಸೋಜೋಯಿಕ್ ಶಿಲಾಸ್ತರಗಳನ್ನೂ ಕಾಣಬಹುದು. ಇವು ಬಹುಮಟ್ಟಿಗೆ ಸಮುದ್ರೀಯ ಮರಳುಶಿಲೆ ಹಾಗೂ ಸಣ್ಣ ಶಿಲಾಸ್ತರಗಳು. ನಡುವೆ ಅಲ್ಲಲ್ಲೆ ಜ್ವಾಲಾಮುಖಿ ಟುಫ್ ಹಾಗೂ ಪಾರ್ಫಿರಿ ಮತ್ತು ಪಾರ್ಫಿರೈಟುಗಳಿಂದಾದ ಕದಂಬಶಿಲೆಯನ್ನು ಗುರುತಿಸಲಾಗಿದೆ. ಪಾರ್ಫಿರೈಟಿನಲ್ಲಿ ಸಮುದ್ರಜೀವಿಗಳ ಅವಶೇಷಗಳು ಬೆರೆತಿರುವ ಕಾರಣ ಅವುಗಳಿಗೆ ಮೂಲವಾದ ಜ್ವಾಲಾಮುಖಿಗಳು ಸಮುದ್ರತಳದಲ್ಲಿದ್ದುವೆಂದು ಊಹಿಸಲಾಗಿದೆ. ಈ ಶಿಲಾಸ್ತರಗಳು ದಕ್ಷಿಣ ಆಂಡೀಸ್ ಪರ್ವತಶ್ರೇಣಿಯ ವಿಶಿಷ್ಟ ಲಕ್ಷಣವೆನಿಸಿವೆ. ಇವು ಯಾವ ಒಂದು ಭೂಯುಗದ ನಿರ್ದಿಷ್ಟ ಶಿಲಾಶ್ರೇಣಿಯ ಹಂತಕ್ಕೂ ಸೀಮಿತವಾಗಿರದೆ ಇಡೀ ಜುರಾಸಿಕ್ ಹಾಗೂ ಕ್ರಿಟೇಷಸ್ ಸ್ತರಗಳ ನಡುವೆ ಅಲ್ಲಲ್ಲೆ ಗೋಚರವಾಗಿವೆ. ಒಮ್ಮೊಮ್ಮೆ ಅದೇ ಕಾಲದ ನೈಜ ಸಮುದ್ರೀಯ ಸ್ತರಗಳೊಡನೆ ಕ್ರಮೇಣ ಸೇರಿಹೋಗುವ ಸಂದರ್ಭಗಳೂ ಉಂಟು. ಆಂಡೀಸ್ ಪರ್ವತ ಶ್ರೇಣಿಯ ಉಳಿದ ಭಾಗ ಬಹುಮಟ್ಟಿಗೆ ಬೃಹದಾಕಾರದ ಅಗ್ನಿ ಪರ್ವತಗಳಿಂದ ಹೊರಬಿದ್ದ ಶಿಲಾವಸ್ತುಗಳಿಂದಾದುದು. ಪರ್ವತಗಳ ಭವ್ಯಶಿಖರಗಳೇ ಈ ಜ್ವಾಲಾಮುಖಿಗಳು. ಈ ವರ್ಗದ ಶಿಲೆಗಳಲ್ಲಿ ಲಿಪಾರೈಟ್, ಡೇಸೈಟ್ ಮತ್ತು ಆಂಡೀಸೈಟುಗಳು ಬಹುಮುಖ್ಯವಾದವು. ದಕ್ಷಿಣ ಚಿಲಿ ಪ್ರದೇಶದ ಈಚಿನ ಜ್ವಾಲಮುಖಿಗಳಿಂದ ಹೊರಬಿದ್ದ ಲಾವಾಸ್ತರಗಳಲ್ಲಿ ಆಲಿವೀನ್-ಹೈಪರ್‍ಸ್ತೀನ್ ಆಂಡಿಸೈಟ್, ಬೆಸಾಲ್ಟ್ ಮೊದಲಾದ ಅಗ್ನಿಶಿಲೆಗಳನ್ನು ಕಾಣಬಹುದು. 							(ಬಿ.ವಿ.ಜಿ.)

	ಭೌತಲಕ್ಷಣ : ಭೌತಿಕವಾಗಿ ಚಿಲಿಯನ್ನು ಮೂರು ಭಾಗಗಳನ್ನಾಗಿ ವಿಂಗಡಿಸಬಹುದು : 1 ಉತ್ತರ ಚಿಲಿ (ದ. ಅ. 18ಔ-ದ.ಅ. 30ಔ), 2 ಮಧ್ಯ ಚಿಲಿ (ದ. ಅ. 30ಔ-ದ. ಅ. 42ಔ).3 ದಕ್ಷಿಣ ಚಿಲಿ (ದ. ಅ. 42ಔ -ದ. ಅ. 56ಔ). ದಕ್ಷಿಣೋತ್ತರವಾಗಿ ಹಬ್ಬಿರುವ ಆಂಡೀಸ್ ಪರ್ವತಶ್ರೇಣಿಗಳು ಚಿಲಿ ದೇಶದ ಕಡೆಗೆ ಹೆಚ್ಚು ಇಳುಕಲಾಗಿವೆ. ಇವುಗಳ ಎತ್ತರ ಸಮುದ್ರಮಟ್ಟದಿಂದ 2,333 ಮೀ-7,333 ಮೀ. ಚಿಲಿಯಲ್ಲಿ ಆಂಡೀಸಿನ ಉತ್ತರದ ಕೊನೆಯಾದ ಪುನದ ಅಟಕಾಮ ಪ್ರಸ್ಥಭೂಮಿಯ ಎತ್ತರ 15,000'. ಮಧ್ಯ ಚಿಲಿಯಲ್ಲಿ ಈ ಶ್ರೇಣಿಗಳು ಗರಿಷ್ಠ ಎತ್ತರ ತಲುಪುತ್ತವೆ. ಆಕಂಕಾಗ್ವ ಶಿಖರದ ಎತ್ತರ 7,610 ಮೀ (23,080'). ದಕ್ಷಿಣ ಚಿಲಿಯ ರೇವುಪಟ್ಟಣವಾದ ಬಾಲ್ಪಾರಾಯೀಸೊಗೂ ಅರ್ಜೆಂಟೀನದ ಮುಖ್ಯ ಪಟ್ಟಣವಾದ ಬ್ವೇನಸ್ ಏರಿಸ್‍ಗೂ ಸಂಬಂಧ ಕಲ್ಪಿಸುವ ಖಂಡಾಂತರ ರೈಲ್ವೆಯಸುರಂಗಮಾರ್ಗ ಇರುವುದು ಈ ಕಣಿವೆಮಾರ್ಗಕ್ಕೆ ದಕ್ಷಿಣದಲ್ಲಿ. ದಕ್ಷಿಣಕ್ಕೆ ಸಾಗಿದಂತೆ ಈ ಶ್ರೇಣಿಗಳ ಎತ್ತರ ಕಡಿಮೆ. ದಕ್ಷಿಣ ತುದಿಯಲ್ಲಿ ಇವು ಕವಲೊಡೆದು ಸಮುದ್ರದಲ್ಲಿಳಿದು ತೀರವನ್ನು ಅಂಕುಡೊಂಕುಗೊಳಿಸಿವೆಯಲ್ಲದೆ ಹಲವಾರು ದ್ವೀಪಗಳಿಗೆ ಕಾರಣವಾಗಿವೆ. ದಕ್ಷಿಣದ ಹಲವು ಶಿಖರಗಳು ಹಿಮಾಚ್ಛಾದಿತ. ಹಲವು ಶಿಖರಗಳು ಜ್ವಾಲಾಮುಖಿಗಳು. ಅವು ನೋಡಲು ಬಲುಸುಂದರವಾಗಿವೆ. ಉತ್ತರ ಚಿಲಿ ಮರುಭೂಮಿ. ಇದು ಜಗತ್ತಿನ ಪ್ರಮುಖ ಒಣ ಪ್ರದೇಶಗಳಲ್ಲೊಂದು. ಮಧ್ಯ ಚಿಲಿ ಫಲವತ್ತಾದ ಮೈದಾನ ಇಲ್ಲೇ ಚಿಲಿಯ ಶೇ. 90ರಷ್ಟು ಜನ ವಾಸಿಸುತ್ತಾರೆ.

	ಆಂಡೀಸಿನಲ್ಲಿ ಹುಟ್ಟಿ ಚಿಲಿಯಲ್ಲಿ ಹರಿದು ಪೆಸಿಫಿಕ್ ಸಾಗರ ಸೇರುವ ನದಿಗಳ ಸಂಖ್ಯೆ ಸುಮಾರು 30. ಅವುಗಳಲ್ಲಿ ಹಲವು ವೇಗವಾಗಿ ಹರಿಯುತ್ತವೆ. ಉತ್ತರದಲ್ಲಿ ಹೆಚ್ಚು ನದಿಗಳಿಲ್ಲ. ಇಲ್ಲಿ ಹರಿಯುವ ಲೋವಾ ಎಂಬುದು ಚಿಲಿಯ ಅತ್ಯಂತ ಉದ್ದವಾದ ನದಿ (235 ಮೈ.). ಇದು ವರ್ಷವೆಲ್ಲ ಹರಿಯುತ್ತದೆ. ಎರಡನೆಯ ದೊಡ್ಡ ನದಿ ಕೋಪಿಯಾಪೋ (112 ಮೈ). ಈ ನದಿಯ ನೀರೆಲ್ಲ ವ್ಯವಸಾಯಕ್ಕೆ ಬಳಕೆಯಾಗುತ್ತದೆ. ದಕ್ಷಿಣದಲ್ಲಿ ಅನೇಕ ಸಣ್ಣಪುಟ್ಟ ನದಿಗಳಿವೆ. ಇವುಗಳಲ್ಲಿ ನೀರು ಯಥೇಚ್ಛ. ಇವು ವಿದ್ಯುತ್ ಉತ್ಪಾದನೆಗೆ ಅನುಕೂಲವಾಗಿವೆ. ಚಿಲಿಯ ಸರೋವರಗಳು ಜಗತ್ತಿನಲ್ಲೇ ಅತ್ಯಂತ ಸುಂದರವೆಂದು ಪ್ರಸಿದ್ಧವಾಗಿವೆ. ದಕ್ಷಿಣ ಚಿಲಿಯಲ್ಲಿ ಬೀಯೊ-ವೀಯೊ ನದಿಗೆ ದಕ್ಷಿಣದಲ್ಲಿ ಅನೇಕ ಹಿಮಾನಿ ಸರೋವರಗಳಿವೆ. ಅವುಗಳ ಪೈಕಿ ಯಾಂಗ್‍ಕೀವೆ (329 ಚ.ಮೈ.) ಮತ್ತು ರಾಂಕೊ (157 ಚ. ಮೈ) ಅತ್ಯಂತ ದೊಡ್ಡವು. ಸರೋವರ ಪ್ರದೇಶ ಪ್ರವಾಸಿಗಳ ಸತತ ಆಕರ್ಷಣೆಯಾಗಿದೆ.

	ವಾಯುಗುಣ : ಚಿಲಿಯ ವಾಯುಗುಣ ವೈಪರೀತ್ಯಗಳಿಂದ ಕೂಡಿದ್ದು, ಉತ್ತರ ಭಾಗ ಶುದ್ಧ ಮರಳುಗಾಡು. ಮಧ್ಯ ಚಿಲಿಯ ಕಡೆಗೆ ಸಾಗಿದಂತೆ ಮಳೆ ಅಧಿಕವಾಗುತ್ತದೆ. ದಕ್ಷಿಣ ಚಿಲಿಯಲ್ಲಿ ಬೀಳುವಷ್ಟು ಮಳೆ ಉಷ್ಣವಲಯದ ಹೊರಗಿರುವ ಬೇರಾವ ಪ್ರದೇಶದಲ್ಲೂ ಬೀಳುವುದಿಲ್ಲ. ದ. ಅ. 30ಔ ಯ ಸುಮಾರಿನಲ್ಲಿ ಪೆಸಿಫಿಕ್‍ನಲ್ಲಿ ಶಾಶ್ವತ ಉನ್ನತ ಒತ್ತಡ ಪ್ರದೇಶದಿಂದಾಗಿ ಉತ್ತರದ ಕಡೆಗೆ ಮಾರುತಗಳು ಬೀಸುತ್ತವೆ. ಆದ್ದರಿಂದ ಆ ಪ್ರದೇಶ ಶುಷ್ಕ. ಆ ಉನ್ನತ ಒತ್ತಡ ಪ್ರದೇಶಕ್ಕೆ ದಕ್ಷಿಣ ಭಾಗದಲ್ಲಿ ಚಂಡಮಾರುತಗಳು ಅಧಿಕ. ದಕ್ಷಿಣ ಭಾಗದಲ್ಲಿಯ ಕಡಿಮೆ ಒತ್ತಡದ ಪ್ರದೇಶಗಳ ಪಟ್ಟಿಗಳು ಬಿರುಗಾಳಿಗಳಿಗೆ ಕಾರಣವಾಗಿವೆ. ಪಶ್ಚಿಮದಿಂದ ಬೀಸುವ ಮಾರುತಗಳು ಮಳೆ ತರುತ್ತವೆ. ಉತ್ತರದಲ್ಲಿ ಸರಾಸರಿ ಮಳೆ 1-5ಮಿಮೀ. ನಷ್ಟು (0.06") ಕಡಿಮೆ ದಕ್ಷಿಣಕ್ಕೆ ಸಾಗಿದಂತೆ ಹೆಚ್ಚು. ಲಾ ಸೆರೇನಾದಲ್ಲಿ (ದ. ಅ. 30 ಔ) 141 ಮಿಮೀ. (5, 6"), ಬಾಲ್ಪಾರಾಯೀಸೊದಲ್ಲಿ (ದ. ಅ. 33 ಔ) 500 ಮಿಮೀ. (19.7). ಇನ್ನೂ ದಕ್ಷಿಣಕ್ಕೆ ಬಾಲ್ಟೀವಿಯದಲ್ಲಿ (ದ. ಅ. 39 ಔ 50') 2,707 ಮಿಮೀ (107"). ದ. ಅ. 53 ಔ ಯಲ್ಲಿರುವ ಬಾಯೀಯಾ ಫೆಲಿಕ್ಸ್‍ನಲ್ಲಿ 5,379 ಮಿಮೀ. (216") ಮಳೆಯಾಗುತ್ತದೆ. ಕಣಿವೆ ಪ್ರದೇಶಗಳಿಗಿಂತ ಆಂಡೀಸಿನ ಪಶ್ಚಿಮ ಇಳಿಜಾರುಗಳಲ್ಲಿ ಮಳೆ ಅಧಿಕ.

	ಪೆರು ಶೀತೋದಕ ಪ್ರವಾಹ ಚಿಲಿಯ ತೀರವನ್ನು ದ. ಅ. 40ಔ ಯ ಬಳಿ ಮುಟ್ಟಿ ತೀರದಲ್ಲೇ ಉತ್ತರಾಭಿಮುಖವಾಗಿ ಹರಿಯುತ್ತದೆ. ಆದ್ದರಿಂದ ಚಿಲಿಯ ಉಷ್ಣತೆ ಸಾಮಾನ್ಯವಾಗಿ ಇರಬೇಕಾದ್ದಕ್ಕಿಂತ ಕಡಿಮೆ. ಉತ್ತರ ಭಾಗದಲ್ಲಿರುವ ಆರೀಕಾದಲ್ಲೂ ಬೇಸಿಗೆಯಲ್ಲಿ ಸರಾಸರಿ ಉಷ್ಣತೆ 75 ಫ್ಯಾ. ಗಿಂತ ಹೆಚ್ಚಿರುವುದಿಲ್ಲ. ಇಕೀಕೆಯಲ್ಲಿ ಮಧ್ಯಕ ಉಷ್ಣತೆ 66ಔ ಫ್ಯಾ. ಬಾಲ್ಟಾರಾಯೀಸೋದಲ್ಲಿ 58 ಔ ಫ್ಯಾ. 1,704' ಎತ್ತರದಲ್ಲಿರುವ ಸಾಂತಿಯಾಗೋದಲ್ಲಿ 96 ಔ ಫ್ಯಾ-25 ಔ ಫ್ಯಾ. ಮಧ್ಯದ ಕಣಿವೆಯ ದಕ್ಷಿಣ ಭಾಗದಲ್ಲಿರುವ ಬಾಲ್ಡೀವಿಯದಲ್ಲಿ ಜನವರಿ ಅತ್ಯುಷ್ಣ ಮಾಸ (16.5 ಫ್ಯಾ.) ಜುಲೈ ಅತಿ ಶೀತ ಮಾಸ (45 ಫ್ಯಾ.). ಮಧ್ಯ ಚಿಲಿ ಪ್ರದೇಶದಲ್ಲಿ ಜನವಸತಿಗೆ ಅತ್ಯಂತ ಹಿತಕರವಾದ ವಾಯುಗುಣವಿದೆ.

	ಸ್ವಾಭಾವಿಕ ಸಸ್ಯಪ್ರಾಣಿವರ್ಗ : ಚಿಲಿಯ ಶೇ. 70 ಕ್ಕಿಂತ ಹೆಚ್ಚು ಭಾಗ ಪರ್ವತಮಯ. ಸಮುದ್ರಮಟ್ಟದಿಂದ 20,000'ಗೂ ಹೆಚ್ಚಿನ ಎತ್ತರದವರೆಗೆ ನಾನಾ ಎತ್ತರಗಳ ಪ್ರದೇಶಗಳು ಇಲ್ಲುಂಟು. ಮಳೆಯೇ ಆಗದ ಪ್ರದೇಶಗಳಿಂದ ಹಿಡಿದು, 200"ಗಿಂತ ಹೆಚ್ಚು ಮಳೆ ಆಗುವ ಪ್ರದೇಶಗಳವರೆಗೆ ಇದು ಹಬ್ಬಿದೆಯಾದ್ದರಿಂದ ಇಲ್ಲಿಯ ಸಸ್ಯಗಳಲ್ಲಿ ವಿಶೇಷ ವೈವಿಧ್ಯವನ್ನು ಕಾಣಬಹುದು. ನೆಲದ ಎತ್ತರ ಹಾಗೂ ವಾಯುಗುಣಕ್ಕೆ ಅನುಗುಣವಾಗಿ ಇಲ್ಲಿ ಮೂರು ಮುಖ್ಯ ಸಸ್ಯವಲಯಗಳಿವೆ. ಪೆರುವಿನ ಎಲ್ಲೆಯಿಂದ ದ. ಅ. 20 ವರೆಗಿನ ತೀರಪ್ರದೇಶ ಮರುಭೂಮಿ. ದ. ಅ. 20 ಯಿಂದ ದಕ್ಷಿಣಕ್ಕೆ ತೀರದ ಬೆಟ್ಟಗಳ ಪ್ರದೇಶದಲ್ಲಿ ಚಳಿಗಾಲದಲ್ಲಿ ದಟ್ಟ ಮಂಜು ಬೀಳುತ್ತದೆ. ಆದ್ದರಿಂದ ಇಲ್ಲಿಯ ಸಸ್ಯಗಳು ಶ್ರಾಯೀಣ. ದ. ಅ. 24ಔ -ದ. ಅ. 26ಔ 50' ಪ್ರದೇಶದಲ್ಲಿ ನಾಲ್ಕು ಬಗೆಯ ಸಸ್ಯಗಳಿವೆ. ಮಂಜು ಪಟ್ಟೆಯ ನೆಲಕ್ಕಿಂತ ಎತ್ತರದಲ್ಲಿ ಮತ್ತು ಅದಕ್ಕಿಂತ ಕೆಳಗಡೆ ಶುಷ್ಕ ವಿರೋಧಿ ಪೊದೆಗಿಡಗಳೂ ಮಂಜುಪಟ್ಟೆಯ ಪ್ರದೇಶದಲ್ಲಿ ನಾನಾ ಬಗೆಯ ಕಳ್ಳಿಗಳೇ ಮುಂತಾದ ಸಸ್ಯಗಳೂ ಉಂಟು. ದ. ಅ. 20ಔ 50'-ದ. ಅ. 37ಔ ಪ್ರದೇಶದಲ್ಲಿ ಮೆಡಿಟರೇನಿಯನ್ ವಾಯುಗುಣವಿರುವುದರಿಂದ ಆ ವಾಯುಗುಣಕ್ಕೆ ವಿಶಿಷ್ಟವಾದ ಸಸ್ಯಗಳಿವೆ. ಎತ್ತರಕ್ಕೆ ತಕ್ಕಂತೆ ಅವು ಬದಲಾಗುತ್ತವೆ. ಸಮುದ್ರ ಮಟ್ಟದ ಬಳಿಯ ಪ್ರದೇಶದಲ್ಲಿ ಆಲೂಗಡ್ಡೆ ಸಂಬಂಧಿ ಸೊಲೇನಂ, ಮೆರಿಟಿಯಂ ಸಾಮಾನ್ಯ. 2,500' ಎತ್ತರದ ವರೆಗೆ ಕ್ರೈನೊಡೆಂಡ್ರಾನ್ ಪಟಗ್ವ ಎಂಬ ವೃಕ್ಷ, ಸದೃಶ ಲಿಲಿಗಳೂ, ಬೆಲೊಟ ಮೈಯಸೈಗಳೂ ಬೆಳೆಯುತ್ತವೆ. ಕಡಿಮೆ ಎತ್ತರದ ಈ ಪ್ರದೇಶಗಳಲ್ಲಿ ಗೊಬ್ಬಳಿ ಮುಂತಾದ, ಹೆಚ್ಚು ಎತ್ತರಕ್ಕೆ ಬೆಳೆಯದ ಮರಗಳು ಸಾಮಾನ್ಯ. ಪರ್ವತ ಇಳಿಜಾರಿರುವ ಕೆಲವು ಎಡೆಗಳಲ್ಲಿ ಅಂಟುವಾಳ, ಲಿತ್ರಿಯಗಳೂ ಇರುತ್ತವೆ. 4,500' ವರೆಗಿನ ಎತ್ತರದಲ್ಲಿ ವ್ಯಾಲೆನ್ಸೀಲಿಯಂ ಮತ್ತು ಇತರ ಪೊದೆಗಳುಂಟು. ಹಿಮರೇಖೆಯ ಕೆಳಗೆ (ಮಧ್ಯ ಚಿಲಿಯಲ್ಲಿ 14,000') ಮೆತ್ತೆಗಿಡಗಳು ಬೆಳೆಯುತ್ತವೆ. ವಸಂತಕಾಲದಲ್ಲಿ ಹೂಬಿಡುವ ಅನೇಕ ಗಿಡಗಳು ಇವೆ. ದ. ಅ. 37 ಔ -ದ. ಅ. 56ಔ ಪ್ರದೇಶದಲ್ಲಿ ಹೆಚ್ಚು. ಇಲ್ಲಿ ಮಧ್ಯ ವಿಶೇಷ. ಇಲ್ಲಿ ಶಂಕುಪರ್ಣಿಗಳ ಹಲವು ಬಗೆಗಳು ಬೆಳೆಯುತ್ತವೆ. ನಾನಾ ಬಗೆಯ ಬಳ್ಳಿಗಳು, ಪೊದೆಗಳು, ತೆರ್ಮೆಗಳು, ಹಾವಸೆಗಳು ಸಾಮಾನ್ಯ. ತೆರೆದ ಸ್ಥಳಗಳಲ್ಲಿ ಬಿದಿರುಮೆಳೆಗಳಿವೆ. ಚಿಲಿಯ ಹಲವು ಸಸ್ಯಗಳು ಆಂಡಿಯನ್ ಮತ್ತು ಉಪ ಆಂಟಾಕ್ರ್ಟಿಕ್ ಮೂಲ ಅಥವಾ ಸಂಬಂಧ ಉಳ್ಳವು.

	ಆಂಡೀಸ್ ಶ್ರೇಣಿಗಳಿಂದಾಗಿ ದಕ್ಷಿಣ ಅಮೆರಿಕದ ಇತರ ಭಾಗಗಳ ಪ್ರಾಣಿಗಳಿಂದ ಚಿಲಿಯ ಪ್ರಾಣಿಗಳು ಪ್ರತ್ಯೇಕಿಸಲ್ಪಟ್ಟಿವೆ. ಪ್ಯೂಮ, ಗ್ವಾನಾಕೊ, ಆಂಡಿಯನ್ ತೋಳ, ಹ್ಯೂಮಲ್, ಚಿಲ, ಎರಡು ಬಗೆಯ ಕಾಡುಬೆಕ್ಕುಗಳು-ಇವು ಚಿಲಿಯ ದೊಡ್ಡ ಗಾತ್ರದ ಸಸ್ತನಿಗಳು. ಬಹುತೇಕ ನಷ್ಟಜೀವಿಯಾದ ಕಾಡು ಚಿಂಚಿಲವೇ ಮುಂತಾದ ಹಲವು ಬಗೆಯ ಪರ್ವತ ದಂಶಕಗಳಿವೆ. ದಕ್ಷಿಣದ ಕಾಡುಗಳಲ್ಲಿ ಉದರಸಂಚಿಗಳೂ ಡಾರ್ವಿನ್ ನರಿಗಳೂ ದಬಳ್ಬಕೊಂಬಿನ ಪುದುಗಳೂ ಅತಿ ಚಿಕ್ಕ ಜಿಂಕೆಗಳೂ ಇವೆ. ಚಿಲಿಯಲ್ಲಿ ಸಣ್ಣ ಹಕ್ಕಿಗಳು ತುಂಬ ಉಂಟು. ಆದರೆ ದಕ್ಷಿಣ ಅಮೆರಿಕದ ಮುಖ್ಯ ಹಕ್ಕಿಗಳ ಬಗೆಗಳು ಹಲವು ಇಲ್ಲಿಲ್ಲ. ಗೂಳಿಗಪ್ಪೆಗಳೂ, ಕಪ್ಪೆಗಳೂ ಇವೆ. ಸ್ಥಳೀಯ ಶುದ್ಧ ಜಲ ಮೀನುಗಳು ಹೆಚ್ಚಾಗಿಲ್ಲ.

	ಜನಜೀವನ : ಚಿಲಿಯ ಜನಸಂಖ್ಯೆ 88,34,820 (1970). ಅವರಲ್ಲಿ ಶೇ 90ರಷ್ಟು ಜನ ಮಧ್ಯ ಚಿಲಿಯಲ್ಲಿ ಸಾಂಧ್ರೀಕರಿಸಿದ್ದಾರೆ. ಚಿಲಿಯ ಭಾಗದಲ್ಲಿ ಇರುವವರು ಶೇ. 10 ರಷ್ಟು ಮಂದಿ ಮಾತ್ರ. 68.2% ಜನ ಪಟ್ಟಣವಾಸಿಗಳು. ಸಾಂತಿಯಾಗೋ ರಾಜಧಾನಿ, ಚಿಲಿಯ ಅತ್ಯಂತ ದೊಡ್ಡ ನಗರ. ಜನಸಂಖ್ಯೆ ಸು. 25,50,000. ಇತರ ನಗರಗಳು ಬಾಲ್ಪಾರಾಯೀಸೊ (3,00,000), ಕಾನ್ಸೆಪ್ಸಿಯಾನ್ (2,50,000), ಆನ್ತೊಫಾಗಾಸ್ತಾ (1,17,187), ಟೆಮೂಕೊ, ಟಾಲ್ಕಾ, ಷೀಯಾನ್, ಇಸಾರ್ನೊ ಮತ್ತು ಬಾಲ್ಡೀವಿಯ. ಚಿಲಿಯ ಜನಸಂಖ್ಯೆಯಲ್ಲಿ ಅರ್ಧದಷ್ಟು ಜನ 20 ವರ್ಷ ವಯಸ್ಸಿಗಿಂತ ಕಡಿಮೆಯವರು. ಸೇ. 32.4ರಷ್ಟು ಮಂದಿ ಆರ್ಥಿಕ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಚಿಲಿಯಲ್ಲಿ ಜನನ ದರ 1964ರಲ್ಲಿ 1,000 ಕ್ಕೆ 35.4 ಇತ್ತು ; 1968ರ ವೇಳೆಗೆ 28.0ಗೆ ಇಳಿಯಿತು.

	ಚಿಲಿಯ ಜನರಲ್ಲಿ 68%ರಷ್ಟು ಸ್ಟ್ಯಾನಿಷ್-ಇಂಡಿಯನ್ ಮಿಶ್ರ ಸಂತಾನ, 30% ಐರೋಪ್ಯ, 2% ಶುದ್ಧ ಇಂಡಿಯನ್, ಬಾಲ್ಡೇವಿಯ ಪ್ವೆರ್ಟೊಮಾಂಟ್ ಪ್ರದೇಶದಲ್ಲಿ 30,000 ಜರ್ಮನರು ಮತ್ತು ಜರ್ಮನ್ ವಂಶಸ್ಥರು ಇದ್ದಾರೆ. ಮೂಲವಾಸಿಗಳಾದ ಆರಾಕೇನಿಯನ್ ಇಂಡಿಯನರು ಸು. 1,00,000. ಇವರು ಬಹುತೇಕ ಅರಣ್ಯವಾಸಿಗಳು.

	ಚಿಲಿಯ ರಾಷ್ಟ್ರಭಾಷೆ ಸ್ಪ್ಯಾನಿಷ್. ಜರ್ಮನ್ ಭಾಷೆ ಆಡುವವರು ಸ್ವಲ್ಪ ಜನರುಂಟು. ಆರಾಕೇನಿಯನ್ ಇಂಡಿಯನರು ತಮ್ಮ ಭಾಷೆಯ ಜೊತೆಗೆ ಸ್ಪ್ಯಾನಿಷನ್ನೂ ಆಡುತ್ತಾರೆ. 89.5%ಜನ ರೋಮನ್ ಕ್ಯಾಥೊಲಿಕರು. ಫುಟ್ ಬಾಲ್ ಇಲ್ಲಿಯ ಜನಪ್ರಿಯ ಕ್ರೀಡೆ. ಸ್ಕೀಯಿಂಗ್, ಮೀನು ಹಿಡಿಯುವುದು-ಇವುಗಳಲ್ಲೂ ಜನರಿಗೆ ಆಸಕ್ತಿ.

	ವ್ಯವಸಾಯ, ಪಶುಪಾಲನೆ, ಅರಣ್ಯಗಾರಿಕೆ : ಚಿಲಿಯ ಒಟ್ಟು ವಿಸ್ತೀರ್ಣದಲ್ಲಿ ಕೃಷಿಯೋಗ್ಯವಾದ ನೆಲದ ಭಾಗ ಬಲು ಕಡಿಮೆ. ಚಿಲಿಯ ಜನರು ಮುಖ್ಯವಾಗಿ ವ್ಯವಸಾಯವನ್ನೂ ಅವಲಂಬಿಸಿದ್ದಾರೆ. ಕೃಷಿಗೆ ಒಳಪಟ್ಟ ನೆಲದ ಬಹುಭಾಗ ಇರುವುದು ಮಧ್ಯ ಚಿಲಿಯಲ್ಲಿ. ಎರಡನೆಯ ಮಹಾಯುಧ್ಧದವರೆಗೂ ಆಹಾರ ವಿಚಾರದಲ್ಲಿ ಚಿಲಿ ಸ್ವಾವಲಂಬಿಯಾಗಿತ್ತು. ಅಲ್ಲಿಂದೀಚೆಗೆ ಕೊರತೆ ಉದ್ಭವಿಸಿದೆ. ಆಹಾರ ಆಮದಿನಿಂದಾಗಿ ವಿದೇಶಿ ವಿನಿಮಯ ಸಮಸ್ಯೆ ಉಲ್ಭಣಿಸಿದೆ. ಆಧುನಿಕ ಕೃಷಿ ವಿಧಾನಗಳನ್ನು ಅನುಸರಿಸದಿರುವುದು, ಅನೇಕ ಕೃಷಿಕರು ಇತರರ ನೆಲದಲ್ಲಿ ಬೇಸಾಯ ಮಾಡಬೇಕಾಗಿರುವುದು-ಇವು ಕಡಿಮೆ ಉತ್ಪನ್ನಕ್ಕೆ ಮುಖ್ಯ ಕಾರಣಗಳು. ಸರಿಯಾಗಿ ಬೇಸಾಯ ಮಾಡಿದರೆ ಚಿಲಿಯ ನೆಲ ಈಗಿನ ಜನಸಂಖ್ಯೆಯ ನಾಲ್ಕರಷ್ಟಕ್ಕೆ ಸಾಕಷ್ಟು ಆಹಾರ ಒದಗಿಸಬಲ್ಲುದು. ಈ ದೃಷ್ಟಿಯಿಂದ ಅಲ್ಲಿ ವ್ಯಾಪಕವಾದ ಭೂಸುಧಾರಣೆಗಳು ಜಾರಿಗೆ ಬಂದಿವೆ. ಚಿಲಿಯ ಮುಖ್ಯ ಬೆಳೆಗಳು ಗೋದಿ, ಬಾರ್ಲಿ, ಓಟ್ಸ್, ರೈ, ಮೆಕ್ಕೆಜೋಳ, ಆಲೂಗಡ್ಡೆ, ಹುರುಳಿ, ಲೆಂಟಿಲ್, ಅನೇಕ ಬಗೆಯ ಹಣ್ಣುಗಳೂ ಬೆಳೆಯುತ್ತವೆ. ಗೋದಿ, ಸಕ್ಕರೆ, ಕಾಫಿ, ಚಹ, ಬನಾನ, ಹತ್ತಿ ಇವನ್ನು ಚಿಲಿ ಆಮದು ಮಾಡಿಕೊಳ್ಳುತ್ತದೆ. ದ್ರಾಕ್ಷಿ ಒಂದು ಮುಖ್ಯ ಬೆಳೆ. ವೈನ್ ತಯಾರಿಕೆ ಪ್ರವರ್ಧಮಾನವಾಗಿದೆ. ಊಟದ ವೇಳೆಯಲ್ಲಿ ವೈನನ್ನು ಸೇವಿಸುವುದು ಚಿಲಿಯನರ ಪದ್ಧತಿಯಾದ್ದರಿಂದ ದೇಶದಲ್ಲೇ ಇದಕ್ಕೆ ಸ್ಥಿರವಾದ ಬೇಡಿಕೆಯಿದೆ. ಇದು ರಫ್ತೂ ಆಗುತ್ತದೆ.

	ಚಿಲಿಯಲ್ಲಿ ದನ, ಕುರಿಗಳನ್ನು ಹೆಚ್ಚಾಗಿ ಸಾಕುತ್ತಾರೆ. ಕುದುರೆ, ಆಡು ಇತರ ಸಾಕುಪ್ರಾಣಿಗಳು, ಚಿಲಿಯನರಿಗೆ ಸಾಕಾಗುವಷ್ಟು ಮಾಂಸ ಅಲ್ಲಿ ಉತ್ಪತ್ತಿಯಾಗುವುದಿಲ್ಲ. ಚಿಲಿಯ ಅಗತ್ಯದಲ್ಲಿ 35% ಹೊರಗಡೆಯಿಂದ ಬರುತ್ತದೆ.

	ಚಿಲಿಯ ಒಟ್ಟು ನೆಲದಲ್ಲಿ ಶೇ. 10ರಷ್ಟು ಭಾಗದಲ್ಲಿ ವಾಣಿಜ್ಯ ಚೌಬೀನೆ ಮರಗಳಿವೆಯೆಂಬುದಾಗಿ 1946ರಲ್ಲಿ ನಡೆಸಿದ ಒಂದು ಸರ್ವೇಕ್ಷಣೆಯಿಂದ ವೇದ್ಯವಾಗಿದೆ. ಆದರೆ ಇದರಲ್ಲಿ ಬಹುಭಾಗ ಇರುವುದು ಸಂಚಾರ ಕಷ್ಟಸಾಧ್ಯವಾದ ದಕ್ಷಿಣ ಚಿಲಿಯಲ್ಲಿ. ದೇಶಕ್ಕೆ ಅಗತ್ಯವಾದ ಗಟ್ಟಿ ಹಾಗೂ ಮೆದು ಮರಗಳೂ ಇವೆ. ರಚನೆಗೆ ಅಗತ್ಯವಾದ ಭಾರವಾದ ಮರಗಳು ಕಡಿಮೆ. ಒಂದನೆಯ ಮಹಾಯುದ್ಧಕ್ಕೆ ಮುಂಚೆ ಚೌಬೀನೆ ಕೈಗಾರಿಕೆ ಅದಕ್ಷವೂ ಅಪವ್ಯಯಕಾರಿಯೂ ಆಗಿತ್ತು. ಅನಂತರ ಈ ಕೈಗಾರಿಕೆ ಬೆಳೆಯಲಾರಂಭಿಸಿತು. ಇದಕ್ಕೆ ರಕ್ಷಣೆ ನೀಡಲಾಯಿತು. ಅರಣ್ಯ ರಕ್ಷಣೆ ಕತ್ತು ಅಭಿವೃದ್ಧಿ ಕಾರ್ಯಕ್ರಮಗಳು ಜಾರಿಗೆ ಬಂದವು. ಈಗ ಚೌಬೀನೆ ಆಮದು ಬಹುತೇಕ ನಿಂತಿದೆ. ಪ್ಲೈವುಡ್, ಮರದ ತಿರುಳು ಮುಂತಾದ ಅನೇಕ ಕೈಗಾರಿಕೆಗಳು ಬೆಳೆದಿವೆ. ದಕ್ಷಿಣ ಅರಣ್ಯ ಪ್ರದೆಶಗಳಲ್ಲಿ ಸಮಚಾರ ಸೌಲಭ್ಯಗಳನ್ನು ಹೆಚ್ಚಿಸಲು ಪ್ರಯತ್ನಗಳಾಗುತ್ತಿವೆ.

	ಗಣಿಗಾರಿಕೆ, ಮತ್ಸ್ಯೋದ್ಯಮ, ಕೈಗಾರಿಕೆ : ನೈಟ್ರೇಟ್ ಮತ್ತು ತಾಮ್ರ ಪ್ರಮುಖ ಖನಿಜಗಳು. ಇವು ಉತ್ತರ ಚಿಲಿಯಲ್ಲಿ ಹೇರಳವಾಗಿ ಸಿಗುತ್ತವೆ. ನೈಸರ್ಗಿಕ ನೈಟ್ರೇಟಿನಲ್ಲಿ ಚಿಲಿಯದು ಏಕಸ್ವಾಮ್ಯ. ತಾಮ್ರ ಉತ್ಪಾದನೆಯಲ್ಲಿ ಇದು ಜಗತ್ತಿನಲ್ಲಿ ಮೂರನೆಯದು. ಈ ದೇಶದಲ್ಲಿ ಉತ್ತಮ ದರ್ಜೆಯ ಗಂಧಕದ ಗಣಿಗಳಿವೆ. ಅಲ್ಲದೆ ಕಬ್ಬಿಣದ ಅದುರು, ಕಲ್ಲಿದ್ದಲು, ಬೆಳ್ಳಿ, ಸತು, ತವರ, ಬಂಗಾರ, ಬೋರ್ಯಾಕ್ಸ್, ಮ್ಯಾಂಗನೀಸ್, ಸೀಸ, ತೈಲ ಮುಂತಾದವು ದೊರೆಯುತ್ತವೆ. ಅನೇಕ ಗಣಿ ಉದ್ಯಮಗಳು ಅಮೆರಿಕನರ ಒಡೆತನಕ್ಕೆ ಸೇರಿವೆ.

	ಚಿಲಿಯ ಕಡಲ ತೀರದಲ್ಲಿ ಅನೇಕ ಬಗೆಯ ಮೀನುಗಳು ಸಮೃದ್ಧವಾಗಿವೆ. ಆದರೆ ಮತ್ಸ್ಯೋದ್ಯಮವನ್ನು ಬೆಳೆಸಲು ವ್ಯವಸ್ಥಿತ ಕಾರ್ಯಕ್ರಮ ಆರಂಭವಾದ್ದು 1930ರಲ್ಲಿ. ಟ್ಯೂನ, ಕಾಂಗ್ರಿಯೊ, ಕಾರ್ವಿನ, ಸಾರ್ಡಿನ್, ಹೇಕ್, ಸೀರ-ಇವು ಮಾರಾಟವಾಗುತ್ತಿವೆ. ಚಿಲಿಯ ಜನ ಮೀನು ತಿನ್ನುವ ಅಭ್ಯಾಸ ಬೆಳೆಸಿಕೊಂಡಿಲ್ಲ. ಅವರ ಆಹಾರಾಭ್ಯಾಸಗಳಲ್ಲಿ ಬದಲಾವಣೆ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
	ನೇಯ್ಗೆ, ಆಹಾರೋತ್ಪಾದನೆ, ಹಡಗು ನಿರ್ಮಾಣ, ಚರ್ಮ ಹದ ಮಾಡುವುದು, ಹಿಟ್ಟಿನ ಗಿರಣಿ, ಮಧ್ಯ, ನೂಲಿನ ಗಿರಣಿ, ಚರ್ಮದ ವಸ್ತುಗಳ ತಯಾರಿಕೆ, ಎರಕ, ಲೋಹೋದ್ಯಮ, ಪ್ಲೈವುಡ್, ಕಾಗದ, ಹೆಂಚು, ಗಾಜು, ಕಬ್ಬಿಣ ಉಕ್ಕು-ಮುಂತಾದ ಹಲವು ಕೈಗಾರಿಕೆಗಳಿವೆ. ಚಿಲಿಯ ಹಲವು ಕೈಗಾರಿಕೆಗಳು ಸಾಂತಿಯಾಗೋ ಮತ್ತು ಬಾಲ್ಪಾರಾಯೀಸೊ ಸುತ್ತ ಸ್ಥಾಪಿತವಾಗಿವೆ. ಕಾನ್ಸೆಪ್ಸಿಯಾನ್ ಇನ್ನೊಂದು ಕೈಗಾರಿಕಾವಲಯ. ಕೈಗಾರಿಕೆಗೆ ಬೇಕಾದ ತೈಲ, ಉತ್ತಮ ಕಲ್ಲಿದ್ದಲು ಹೆಚ್ಚಾಗಿಲ್ಲವಾದ್ದರಿಂದ ಜಲವಿದ್ಯುದುತ್ಪಾದನೆಗೆ ಗಮನ ಕೊಡಲಾಗಿದೆ.

	ವ್ಯಾಪಾರ, ಸಾರಿಗೆ, ಸಂಪರ್ಕ : ಚಿಲಿಯ ವ್ಯಾಪಾರ ನಡೆಯುವುದು. ಬಹುತೇಕ ಸಮುದ್ರಮಾರ್ಗದ ಮೂಲಕ, ಆಹಾರ ಧಾನ್ಯಗಳು ಮಧ್ಯ ಚಿಲಿಯಿಂದ ಉತ್ತರ ಚಿಲಿಗೆ ಹಡಗುಗಳಲ್ಲಿ ರವಾನೆಯಾಗುತ್ತವೆ. ದಕ್ಷಿಣ ಚಿಲಿಯಿಂದ ಎಣ್ಣೆ, ಕಲ್ಲಿದ್ದಲು,ಮಾಂಸ, ಉಣ್ಣೆ, ಮುಂತಾದುವು ಮಧ್ಯ ಚಿಲಿಗೆ ಸಾಗುತ್ತವೆ. ತಾಮ್ರ, ನೈಟ್ರೇಟ್, ಮದ್ಯ, ಹಣ್ಣು. ಕಬ್ಬಿಣದ ಅದುರು ಉಣ್ಣೆ, ಒಣಗಿದ ಮತ್ತು ಡಬ್ಬಗೆ ತುಂಬಿದ ಹಣ್ಣುಗಳೂ, ದ್ರಾಕ್ಷಿ, ಚರ್ಮ, ಮಾಂಸ ಇವು ಮುಖ್ಯ ನಿರ್ಯಾತ ಸರಕುಗಳು. ತೈಲ, ಯಂತ್ರ, ರೈಲ್ವೆ ಸಲಕರಣೆ, ಹಡಗು, ವಾಹನ, ಸಕ್ಕರೆ, ಹತ್ತಿ, ಕಾಫಿ, ಚಹ, ದನದ ಮಾಂಸ ಇವು ಪ್ರಮುಖ ಆಯಾತ ಸರಕುಗಳು.

	ದೇಶದಲ್ಲಿ 43,642 ಕಿಮೀ. ರಸ್ತೆ ಮತ್ತು 9,857 ಕಿಮೀ. ರೈಲುಮಾರ್ಗಗಳಿವೆ. ಚಿಲಿ ಪರ್ವತಮಯವಾದ್ದರಿಂದ ಭೂಸಾರಿಗೆಗೆ ಹೆಚ್ಚು ಸೌಲಭ್ಯಗಳಿಲ್ಲ. ಒಳನಾಡಿನಿಂದ ಬಂದರುಗಳಿಗೆ ರೈಲುಮಾರ್ಗಗಳು ಮತ್ತು ರಸ್ತೆಗಳು ಸಂಪರ್ಕ ಕಲ್ಪಿಸಿವೆ. ಪಿಸಾಗ್ವಾ-ಪ್ವೆರ್ಟೊ ಮಾಂಟ್, ಆರೀಕಾ-ಲಾ ಪಾಸ್, ಲೊಸ್ ಆಂಡೆಸ್-ಮೆಂಡೋಸಾ (ಆರ್ಜೆಂಟೀನ), ಬಾಲ್ಪಾರಾಯೀಸೊ-ಸಾಂತಿಯಾಗೊ, ಆನ್ತೊಫಾಗಾಸ್ತಾ-ಸಾಲ್ತಾ (ಆರ್ಜೆಂಟೀನ)-ಇವು ಮುಖ್ಯ ರಾಷ್ಟ್ರೀಯ ರೈಲು ಮಾರ್ಗಗಳು. ವಿವಿಧ ಗೇಣುಗಳಿಂದಾಗಿ, ಹಲವು ರೈಲ್ವೆ ಸಲಕರಣೆಗಳು ಹಳೆಯವಾಗಿರುವುದರಿಂದ ಸಮಸ್ಯೆಗಳು ಉದ್ಭವಿಸಿವೆ. ಒಳ್ಳೆಯ ರಸ್ತೆಗಳು ಕಡಿಮೆ. ಉತ್ತರದ ಕೆಲವು ರಸ್ತೆಗಳನ್ನು ಗಣಿ ಕಂಪನಿಗಳು ನಿರ್ವಹಿಸುತ್ತಿವೆ. ಆರೀಕಾ, ಆನ್ತೊಫಾಗಾಸ್ತಾ, ಕೊಕೀಂಬೊ, ಬಾಲ್ವಾರಾಯೀಸೊ, ಸಾನ್ ಆಂತೋನಿಯೊ, ಮತ್ತು ಪ್ವೆರ್ಟೊ ಮಾಂಟ್ ಆಧುನಿಕ ಬಂದರುಗಳು. ಸುಮಾರು 30 ನಗರಗಳಲ್ಲಿ ವಿಮಾನ ನಿಲ್ದಾಣಗಳುಂಟು. ಅವುಗಳಲ್ಲಿ 5 ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು, ಚಿಲಿಯ ನಾಣ್ಯ ಎಸ್ಕೂಡೋ.      

	ಶಿಕ್ಷಣ ಪದ್ಧತಿ : ವಸಾಹತು ಕಾಲದ ಚಿಲಿಯಲ್ಲಿ ಶಿಕ್ಷಣ ಸೌಲಭ್ಯ ಅಷ್ಟಾಗಿ ವ್ಯವಸ್ಥೆಗೊಂಡಿರಲಿಲ್ಲ. ಚರ್ಮಗಳು ದೇಶದ ಕೆಲವೆಡೆಗಳಲ್ಲಿ ಶಾಲೆಗಳನ್ನು ನಡೆಸುತ್ತಿದ್ದವು. ಸಾರ್ವಜನಿಕ ಶಿಕ್ಷಣ ಹತ್ತೊಂಬತ್ತನೆಯ ಶತಮಾನದ ಮಧ್ಯಕಾಲದ ವೇಳೆಗೆ ಅಸ್ಥಿತ್ವಕ್ಕೆ ಬರಲಾರಂಭಿಸಿತು. ಆ ಶತಮಾನದ ಕೊನೆಕೊನೆಗೆ ಶಾಲಾ ಕಟ್ಟಡಗಳ ನಿರ್ಮಾಣಕಾರ್ಯ ಆರಂಭವಾಗಿ ಇಪ್ಪತ್ತನೆಯ ಶತಮಾನದಲ್ಲಿ ಮುಂದುವರಿಯುತ್ತಿದೆ. 1920ರ ವೇಳೆಗೆ 7-15ರ ವಯೋಮಾನದ ಮಕ್ಕಳಿಗೆ ಶಿಕ್ಷಣ ಕಡ್ಡಾಯವಾಯಿತು. ಆಂದ್ರೆ ಬೆಲೊ ಎಂಬ ವೆನಿಜ್ವೇಲದ ಕಾರ್ಯದಲ್ಲಿ ಪ್ರೋತ್ಸಾಹ ನೀಡಿದ. ಎರಡನೆಯ ಮಹಾಯುದ್ಧ ಆರಂಭವಾಗುವ ವೇಳೆಗೆ ಪ್ರೌಢಶಿಕ್ಷಣವನ್ನೂ, ಯುದ್ಧಾ ನಂತರ ವೃತ್ತಿ ಮತ್ತು ತಾಂತ್ರಿಕ ಶಿಕ್ಷಣವನ್ನೂ ವಿಸ್ತರಿಲಾಯಿತು.

	ಚಿಲಿ ದೇಶದ ಶಿಕ್ಷಣದ ವ್ಯವಸ್ಥೆ ಮತ್ತು ಆಡಳಿತ ಶಾಸನದತ್ತವಾಗಿ ಕೇಂದ್ರ ಸರ್ಕಾರದ ಹೊಣೆಗಾರಿಕೆಗೆ ಸೇರಿದೆ. ಆ ಕಾರ್ಯವನ್ನು ಅದು ತನ್ನ ಶಿಕ್ಷಣ ಸಚಿವಾಲಯದ ಮೂಲಕ ನಿರ್ವಹಿಸುತ್ತದೆ. 1925ರ ರಾಷ್ಟ್ರ ಘಟನೆಯ 10ನೆಯ ಅನುಚ್ಛೇದ ಬೋಧನಾಸ್ವಾಂತತ್ರ್ಯವನ್ನು ಎತ್ತಿ ಹಿಡಿದಿರುವುದರ ಜೊತೆಗೆ ಶಿಕ್ಷಣ ಸೇವಾವ್ಯವಸ್ಥೆ ರಾಜ್ಯದ ಪ್ರಮುಖ ಕರ್ತವ್ಯಗಳಲ್ಲೊಂದೆಂದು ಸೂಚಿಸಿ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯ ಮಾಡಿದೆ. ರಾಷ್ಟ್ರದ ಶಿಕ್ಷಣ ನೀತಿಯನ್ನು ರೂಪಿಸುವ ಕಾರ್ಯವೂ ಕೇಂದ್ರ ಸರ್ಕಾರಕ್ಕೆ ಸೇರಿದೆ.

	ಚಿಲಿಯ ಶಿಕ್ಷಣ ಸಚಿವಾಲಯ ಸಾಮಾನ್ಯ ಆಡಳಿತ ಶಾಖೆಯ ಜೊತೆಗೆ ಶಿಕ್ಷಣದ ಮೇಲ್ವಿಚಾರಣೆ, ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ, ತಾಂತ್ರಿಕ ಶಿಕ್ಷಣ, ಗ್ರಂಥಾಲಯ-ಈ ಕ್ಷೇತ್ರಗಳಿಗೆ ಸಂಬಂಧಿಸಿದ ನಾಲ್ಕು ಕಾರ್ಯಾಲಯಗಳನ್ನೂ ಅಧ್ಯಾಪಕರ ಪ್ರಶಿಕ್ಷಣ ಮತ್ತು ಶೈಕ್ಷಣಿಕ ಪ್ರಯೋಗಗಳ ಕೇಂದ್ರವನ್ನೂ ಒಳಗೊಂಡಿದೆ. ಚಿಲಿ ವಿಶ್ವವಿದ್ಯಾಲಯ, ಶಾಲಾ ಕಟ್ಟಡಗಳ ನಿರ್ಮಾಣದ ಕಾರ್ಪೊರೇಷನ್, ರಾಷ್ಟ್ರೀಯ ವಿದ್ಯಾರ್ಥಿ ಕಲ್ಯಾಣ ಮಂಡಲಿ, ಚಿಲಿ ಇನ್ಸ್ಟಿಟ್ಯೂಟ್, ಚಿಲಿ ವಿಶ್ವವಿದ್ಯಾಲಯಗಳ ಕುಲಪತಿಗಳ ಮಂಡಲಿ, ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನೆಗಳ ಆಯೋಗ-ಇವೇ ಮೊದಲಾದ ಸ್ವಯಂ ಆಡಳಿತ ಸಂಸ್ಥೆಗಳು ಅಲ್ಲಿನ ಶಿಕ್ಷಣದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿವೆ. 

	ಚಿಲಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣದ ಎಲ್ಲ ಮಟ್ಟದಲ್ಲೂ ಅಸ್ತಿತ್ವದಲ್ಲಿವೆ. ರಾಷ್ಟ್ರದ ಶಿಕ್ಷಣವ್ಯವಸ್ಥೆಯ ಮೂರನೆಯ ಒಂದು ಭಾಗದಷ್ಟನ್ನು ಖಾಸಗಿ ಸಂಸ್ಥೆಗಳು ನಿರ್ವಹಿಸುತ್ತವೆ. ಅವೆಲ್ಲ ಸರ್ಕಾರ ಸೂಚಿಸುವ ಪಠ್ಯಕ್ರಮ, ಬೋಧನ ವಿಧಾನ, ಪರೀಕ್ಷಾ ಪದ್ಧತಿ ಮುಂತಾದವನ್ನು ಅನುಸರಿಸುತ್ತವೆ. ಸರ್ಕಾರದ ಅನುದಾನವನ್ನೂ ಪಡೆಯುತ್ತವೆ.

	1865ರಲ್ಲಿ ಚಿಲಿಯ ಜನಸಂಖ್ಯೆಯ ಶೇ. 3ರಷ್ಟು ಮಕ್ಕಳು ಮಾತ್ರ ಶಾಲೆಗೆ ಸೇರಿದ್ದರು. ರಾಷ್ಟ್ರದಲ್ಲಿ ಅಕ್ಷರತೆ ಶೇ. 17ರಷ್ಟು ಮಾತ್ರವಿತ್ತು. ಆದರೆ ಅಲ್ಲಿನವರ ಸತತ ಪ್ರಯತ್ನದ ಫಲವಾಗಿ 1960ರ ವೇಳೆಗೆ ಜನಸಂಖ್ಯೆಯ ಶೇ. 19.7ರಷ್ಟು ಮಕ್ಕಳು ಶಾಲೆಗೆ ಸೇರುವಂತಾಯಿತಲ್ಲದೆ ಸಾಕ್ಷರತೆಯ ಪ್ರಮಾಣ ಶೇ. 83.6ಕ್ಕೆ ಹೆಚ್ಚಿತು. ಸಾಮಾನ್ಯವಾಗಿ ಈಗ ಶಾಲಾಕಾಲೇಜುಗಳಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳು ಸಮಾನ ಸಂಖ್ಯೆಯಲ್ಲಿರುವರು. ಆದರೆ ತಾಂತ್ರಿಕ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳೆಯರು ಗಂಡಸರಿಗಿಂತ ಕಡಿಮೆ ಸಂಖ್ಯೆಯಲ್ಲಿರುವರು.

	19ನೆಯ ಶತಮಾನದ ಮಧ್ಯಕಾಲದಿಂದ ವಿದ್ಯಾಪ್ರಚಾರವನ್ನು ಬಿರುಸಿನಿಂದ ಕೈಗೊಂಡಿದ್ದರೂ ಅದರ ಗುಣಮಟ್ಟವನ್ನು ಹೆಚ್ಚಿಸುವ ಸುಧಾರಣೆಗಳು ಎರಡನೆಯ ಯುದ್ಧಾನಂತರ ಆರಂಭವಾದುವು. ಯೋಜನೆಯ ಅಭಾವ, ವಿದ್ಯಾಸೌಲಭ್ಯದಲ್ಲಿ ಅಸಮಾನತೆ-ಇವುಗಳ ಜೊತೆಗೆ ಹಳೆಯ ಬೋಧನಕ್ರಮದ ನ್ಯೂನತೆಗಳನ್ನೂ ಪರಿಶೀಲಿಸಿ ಆಯೋಗವೊಂದು 1945ರಲ್ಲಿ ಪುನವ್ರ್ಯವಸ್ಥೆಗೆ ಯೋಜನೆ ಹಾಕಿಕೊಟ್ಟಿತು. ಪ್ರೌಢಶಾಲೆಯ ಮಟ್ಟದಲ್ಲಿ ಸಂಶೋಧನೆ ಪ್ರಯೋಗಾದಿಗಳು ನಡೆದು ಅನೇಕ ಮಾರ್ಪಾಟುಗಳು ಆಚರಣೆಗೆ ಬಂದುವು. 1962ರಲ್ಲಿ ಮತ್ತೊಂದು ಆಯೋಗ ಶಿಕ್ಷಣಾಭಿವೃದ್ಧಿಗೆ ರಾಷ್ಟ್ರವ್ಯಾಪಕ ಯೋಜನೆಯನ್ನು ಸಲ್ಲಿಸಿತು. ಅದರ ಫಲವಾಗಿ ಶಿಕ್ಷಣ ಶಾಖೆ, ರಾಷ್ಟ್ರೀಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಮಂಡಲಿ, ಕಟ್ಟಡಗಳ ರಾಷ್ಟ್ರೀಯ ಮಂಡಲಿ-ಇವು 1964ರಲ್ಲಿ ಅಸ್ತಿತ್ವಕ್ಕೆ ಬಂದುವು. ಅಂದಿನಿಂದ ಶಿಕ್ಷಣ ಗುಣದಲ್ಲೂ ಪ್ರಮಾಣದಲ್ಲೂ ಅಭಿವೃದ್ಧಿಯಾಗುತ್ತ ಬರುತ್ತಿದೆ. ಪ್ರಾಥಮಿಕ ಪೂರ್ವದ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದ ವರೆಗಿನ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ವಿದ್ಯಾರ್ಥಿಸಂಖ್ಯೆ ವೇಗದಲ್ಲಿ ಹೆಚ್ಚುತ್ತಿದೆ.

	ಪ್ರಾಥಮಿಕ ಪೂರ್ವ ಶಿಕ್ಷಣ : 1970ರಲ್ಲಿ ಶಾಸನವೊಂದರ ಮೂಲಕ 1 ರಿಂದ 6 ವರ್ಷದವರೆಗಿನ ಮಕ್ಕಳಿಗಾಗಿ ಶಿಶುಪಾಠಶಾಲೆಗಳನ್ನು ಆರಂಭಿಸಿ ನಡೆಸುವ ಹೊಣೆಯನ್ನು ಸರ್ಕಾರ ಹೊತ್ತುಕೊಂಡಿತು. ಆ ಕಾರ್ಯಕ್ಕಾಗಿ ಪ್ರತ್ಯೇಕ ರಾಷ್ಟ್ರೀಯ ಮಂಡಲಿಯೊಂದು ಅಸ್ತಿತ್ವಕ್ಕೆ ಬಂತು. ಈಗ ಆ ವಯೋಮಾನದ ಸುಮಾರು 16 ಲಕ್ಷ ಮಕ್ಕಳು ಶಾಲೆಗೆ ಸೇರಿರುವರು. ರಾಷ್ಟ್ರ ತನ್ನ ಹಣದಿಂದ ಅವರ ಆಹಾರ, ಶಿಕ್ಷಣ, ವೈದ್ಯಪರೀಕ್ಷೆ ಮುಂತಾದವನ್ನು ನೋಡಿಕೊಳ್ಳುತ್ತಿದೆ.

	ಪ್ರಾಥಮಿಕ ಶಿಕ್ಷಣ : ಇದು 6ರಿಂದ 15 ವರ್ಷದ ವರೆಗೆ 8 ವರ್ಷಗಳ ಕಾಲದ್ದಾಗಿದ್ದು ನಾಲ್ಕು ವರ್ಷಗಳ ಎರಡು ಹಂತಗಳಲ್ಲಿ ವ್ಯವಸ್ಥೆಗೊಂಡಿದೆ. ಮೊದಲ ನಾಲ್ಕು ಹಂತದಲ್ಲಿ ಸಾಮಾನ್ಯ ಶಿಕ್ಷಣವನ್ನೂ ಎರಡನೆಯ ಹಂತದಲ್ಲಿ ಸಾಮಾನ್ಯ ಶಿಕ್ಷಣದ ಜೊತೆಗೆ ವೃತ್ತಿಪರ ಶಿಕ್ಷಣವನ್ನೂ ಏರ್ಪಡಿಸಿದೆ. ಸ್ಪ್ಯಾನಿಷ್ ಭಾಷೆ ಶಿಕ್ಷಣ ಮಾಧ್ಯಮವಾಗಿ ಬಳಕೆಯಲ್ಲಿದೆ. ಪ್ರಾಥಮಿಕ ಶಿಕ್ಷಣ ಮುಗಿಸಿದವರು ಕೆಲಸಕ್ಕಾದರೂ ಹೋಗಬಹುದು, ಪ್ರೌಢಶಾಲೆಗಾದರೂ ಸೇರಬಹುದು. ಒಟ್ಟು 7,000ಕ್ಕೂ ಹೆಚ್ಚು ಶಾಲೆಗಳಿದ್ದು ಅಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳಿರುವರು.

ಪ್ರೌಢ ಶಿಕ್ಷಣ : ನಾಲ್ಕು ವರ್ಷಗಳ ಕಾಲಾವಧಿಯ ಇಲ್ಲಿನ ಪ್ರೌಢ ಶಿಕ್ಷಣ ವಿದ್ಯಾರ್ಥಿಗಳನ್ನು ಒಳ್ಳೆಯ ಪೌರರನ್ನಾಗಿ ಮಾಡುವ, ವ್ಯಕ್ತಿತ್ವವನ್ನು ರೂಪಿಸುವ, ಸಾಮಾಜಿಕ ಪ್ರಗತಿಗೆ ನಾಯಕರನ್ನು ಒದಗಿಸುವ ಮತ್ತು ಉದ್ಯೋಗಗಳಿಗೆ ಕೆಲಸಗಾರರನ್ನು ತರಬೇತು ಮಾಡುವ ಹೊಣೆಯನ್ನು ಹೊತ್ತಿರುತ್ತದೆ. ಈ ಹಂತದ ಪಠ್ಯಕ್ರಮ ಎರಡು ಮಾರ್ಗಗಳಲ್ಲಿ ವ್ಯವಸ್ಥೆಗೊಂಡಿದೆ-ಸಾಂಸ್ಕøತಿಕ ಮತ್ತು ವೃತ್ತಿಪರ ಎಂದು. ಮೊದಲ ಪಠ್ಯಕ್ರಮವನ್ನು ಆರಿಸಿಕೊಂಡು ಶಿಕ್ಷಣ ಮುಗಿಸಿದರು. ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆಯುವವರು. ಎರಡನೆಯ ಪಠ್ಯಕ್ರಮವನ್ನು ಆರಿಸಿಕೊಂಡವರು ಉದ್ಯೋಗಗಳಿಗೆ ಸೇರುವರು. ಪ್ರಾಥಮಿಕ ಶಾಲೆಯನ್ನು ಮುಗಿಸಿ ಮುಂದಕ್ಕೆ ಓದಲಾಗದವರಿಗೆ ಔದ್ಯೋಗಿಕ ಶಿಕ್ಷಣವೀಯಲು ಉಮೇದುವಾರಿ ವೃತ್ತಿ ಶಿಕ್ಷಣ ಸಂಸ್ಥೆಗಳಿವೆ. ಅಲ್ಲಿಯದು ಮೂರು ವರ್ಷ ಶಿಕ್ಷಣ. ಆ ಅವಧಿಯ ಶೇ. 70ರಷ್ಟನ್ನು ವೃತ್ತಿಯ ತರಬೇತಿಗೂ ಮಿಕ್ಕದ್ದನ್ನು ಸೈದ್ಧಾಂತಿಕ ಜ್ಞಾನಬೋಧನೆಗೂ ವಿನಿಯೋಗಿಸುವರು. ಯಂತ್ರವಿಜ್ಞಾನ, ವಿದ್ಯುಚ್ಛಕ್ತಿ, ಕೃಷಿ, ಉಡುಪು ತಯಾರಿಕೆ ಮುಂತಾದವು ಪ್ರಚಾರದಲ್ಲಿರುವ ಮುಖ್ಯ ವೃತ್ತಿವಿಷಯಗಳು. ಒಟ್ಟು 400ಕ್ಕೂ ಹೆಚ್ಚು ಪ್ರೌಢಶಾಲೆಗಳೂ 2 ಲಕ್ಷದಷ್ಟು ವಿದ್ಯಾರ್ಥಿಗಳೂ ಇರುವರು.

	ವಯಸ್ಕರ ಶಿಕ್ಷಣ : ರಾಷ್ಟ್ರ ವಯಸ್ಕರ ಶಿಕ್ಷಣಕ್ಕೆ ತುಂಬ ಗಮನಕೊಡುತ್ತಿದೆ. 1965ರಿಂದ ಅದನ್ನು ಮೂರು ಮಟ್ಟಗಳಲ್ಲಿ ವ್ಯವಸ್ಥೆಗೊಳಿಸಿದೆ. ಅನಕ್ಷರಸ್ಥ ವಯಸ್ಕರಿಗಾಗಿ ಸಾಕ್ಷರ ಪ್ರಚಾರ, ಸುಮಾರು ಶಿಕ್ಷಣ ಪಡೆದವರಿಗೆ ಮುನ್ನಡೆಯ ಶಿಕ್ಷಣ, ಕಾರ್ಖಾನೆ ಕಾರ್ಯಾಲಯಗಳಲ್ಲಿ ಕೆಲಸ ಮಾಡತಕ್ಕವರಿಗೆ ಅವರವರ ವೃತ್ತಿಯಲ್ಲಿ ಹೆಚ್ಚಿನ ಶಿಕ್ಷಣ ಈ ಕಾರ್ಯಕ್ರಮಗಳ ಮೂಲಕ 1960ರಲ್ಲಿದ್ದ ಶೇ. 16.4 ಅನಕ್ಷರಸ್ಥರ ಪ್ರಮಾಣ ಈಗ ಶೇ. 5 ಅಥವಾ 6 ಕ್ಕೆ ಇಳಿದಿದೆ.

	ಉನ್ನತ ಶಿಕ್ಷಣ : 2 ರಾಜ್ಯ ವಿಶ್ವವಿದ್ಯಾಲಯಗಳೂ 6 ಖಾಸಗಿ ವಿಶ್ವವಿದ್ಯಾಲಯಗಳೂ ಸೇರಿ ಒಟ್ಟು 8 ವಿಶ್ವವಿದ್ಯಾಲಯಗಳು ಈಗ ಅಸ್ತಿತ್ವದಲ್ಲಿವೆ. ಇವೆಲ್ಲ ಸ್ವಯಮಾಡಳಿತ ಸಂಸ್ಥೆಗಳಾಗಿದ್ದು ಸರ್ಕಾರದಿಂದ ಅನುದಾನವನ್ನು ಪಡೆಯುತ್ತವೆ. ವೃತ್ತಿಶಿಕ್ಷಣ, ಸಂಶೋಧನೆ ಮತ್ತು ಸಂಸ್ಕøತಿ ಸಂವರ್ದನ-ಅವುಗಳ ಪ್ರಮುಖ ಕರ್ತವ್ಯಗಳಾಗಿವೆ. ಚಿಲಿ ವಿಶ್ವವಿದ್ಯಾಲಯ (1931) ಈ ದೇಶದ ರಾಷ್ಟ್ರೀಯ ವಿಶ್ವವಿದ್ಯಾಲಯ. ಇದು 9 ಅಂಗಿಕ (ಘಟಕ) ಸಂಸ್ಥೆಗಳನ್ನೊಳಗೊಂಡಿದ್ದು ಸುಮಾರು 30,000 ವಿದ್ಯಾರ್ಥಿಗಳಿಗೆ ಶಿಕ್ಷಣವೀಯುತ್ತಿದೆ. 1967ರಿಂದೀಚೆಗೆ ಇಲ್ಲಿನ ವಿಶ್ವವಿದ್ಯಾಲಯಗಳ ಆಡಳಿತದಲ್ಲಿ ತೀವ್ರರೀತಿಯ ಸುಧಾರಣೆಗಳಾಗುತ್ತಿವೆ. ಈಚೆಗೆ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಗಳ ಆಡಳಿತ ಮಂಡಲಿಗಳಲ್ಲಿ ಸದಸ್ಯರಾಗುತ್ತಿರುವರು. ಚುನಾವಣೆಗಳಲ್ಲೂ ಭಾಗವಹಿಸುತ್ತಿರುವರು. ಡೀನ್, ರೆಕ್ಟಾರ್, ಪ್ರಿನ್ಸಿಪಾಲ್-ಇವರ ನೇಮಕದಲ್ಲೂ ಅವರ ಅಭಿಮತವನ್ನು ತೆಗೆದುಕೊಳ್ಳುವರು.

	ಅಧ್ಯಾಪಕರ ಪ್ರತಿಕ್ಷಣ : ಅಧ್ಯಾಪಕ ವೃತ್ತಿಗೆ ಸೇರಬಯಸತಕ್ಕವರು ವೃತ್ತಿ ಶಿಕ್ಷಣವನ್ನು ಮುಗಿಸಿರಬೇಕು. ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗತಕ್ಕವರು ನಾರ್ಮಲ್ ಸ್ಕೂಲಿನ ಮೂರು ವರ್ಷದ ಪ್ರಶಿಕ್ಷಣವನ್ನೂ ಪ್ರೌಢಶಾಲೆಯ ಅಧ್ಯಾಪಕರಾಗತಕ್ಕವರು ವಿಶ್ವವಿದ್ಯಾಲಯದ ಐದು ವರ್ಷದ ಶಿಕ್ಷಣವನ್ನೂ ಮುಗಿಸಿರಬೇಕು. ತಾಂತ್ರಿಕ ಶಿಕ್ಷಣದ ಅಧ್ಯಾಪಕರಾಗತಕ್ಕವರು 3 ಅಥವಾ 5 ವರ್ಷಗಳ ವಿಶ್ವವಿದ್ಯಾಲಯದ ಶಿಕ್ಷಣ ಮತ್ತು ಪ್ರಶಿಕ್ಷಣವನ್ನು ಮುಗಿಸಿರಬೇಕು.

	ವೃತ್ತಿನಿರತ ಅಧ್ಯಾಪಕರ ಪ್ರಶಿಕ್ಷಣಕ್ಕೂ ಸಂಶೋಧನೆಗಳಿಗೂ ಹೆಸರಾದ ರಾಷ್ಟ್ರೀಯ ಸಂಸ್ಥೆ (ಸ್ಥಾಪನೆ : 1967) ಅಧ್ಯಾಪಕರಿಗೆ ವಿವಿಧ ರೀತಿಯ ಶೈಕ್ಷಣಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಜೊತೆಗೆ ಅವರ ಬಡ್ತಿಗೂ ಸಿದ್ಧತೆ ನೀಡುತ್ತದೆ. ಇಂಥ ಪ್ರಶಿಕ್ಷಣ ಕಾರ್ಯಕ್ರಮದಲ್ಲೂ ಸಂಶೋಧನೆಯಲ್ಲೂ ಭಾಗವಹಿಸಿದ ವೃತ್ತಿನಿರತ ಅಧ್ಯಾಪಕರ ಸಂಭಾವನೆಯನ್ನು ಶೇ. 20ರಷ್ಟು ಹೆಚ್ಚಿಸಲಾಗುವುದು.

	ಆಧುನಿಕ ಪ್ರವೃತ್ತಿಗಳು ಚಿಲಿಯಲ್ಲಿ ಸದ್ಯದಲ್ಲಿ ಅಸ್ತಿತ್ವದಲ್ಲಿರುವ ಕೇಂದ್ರೀಕೃತ ಶಿಕ್ಷಣದ ಆಡಳಿತ ವ್ಯವಸ್ಥೆ ಪ್ರಗತಿಗೆ ಅಡ್ಡಿಯಾಗಿರುವ ಅಂಶವನ್ನು ಶಿಕ್ಷಣವೇತ್ತರು ಮನಗಂಡು ಈಗ ಅದರ ವಿಕೇಂದ್ರೀಕರಣಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಸಾಂಟಿಯಾಗೋಕ್ಕೆ ದಕ್ಷಿಣದಲ್ಲಿರುವ ಕಾನ್ಸೆಪ್ಸಿಯಾನ್ ಪ್ರದೇಶದಲ್ಲಿ ವಿಕೇಂದ್ರೀಕರಣಕ್ಕೆ ಸಂಬಂಧಿಸಿದ ಪ್ರಯೋಗಗಳು ನಡೆಯುತ್ತಿವೆ. ಅಲ್ಲಿನ ಐದು ಪ್ರಾಂತ್ಯಗಳು ತಮ್ಮ ಶಾಲೆಯ ಆಡಳಿತವನ್ನು ತಾವೇ ನೋಡಿಕೊಳ್ಳುವ ಸ್ವಾತಂತ್ರ್ಯ ಪಡೆದುಕೊಂಡಿವೆ. ಅಲ್ಲಿನ ಶಾಲಾಮಂಡಲಿಗಳು ತಮ್ಮವೇ ಆದ ರೀತಿಯ ಶಿಕ್ಷಣ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಿವೆ. ಈಚೆಗೆ ಇತರ ಪ್ರದೇಶಗಳಲ್ಲೂ ಆಯಾ ಪ್ರಾಂತ್ಯಗಳಿಗೆ ಇದೇ ರೀತಿಯ ಸ್ವಾತಂತ್ರ್ಯವನ್ನು ನೀಡಲಾಗುತ್ತಿದೆ. 1970ರಲ್ಲಿ ಕೇಂದ್ರ ಸರ್ಕಾರ ಶಾಸನವೊಂದರ ಮೂಲಕ ಆಡಳಿತದ ಪುನವ್ರ್ಯವಸ್ಥೆಯನ್ನು ಆಚರಣೆಗೆ ತಂದಿದೆ. ಪ್ರಾಂತೀಯವಾಗಿ ಶಿಕ್ಷಣದ ಕಾರ್ಯಾಲಯಗಳನ್ನು ಆರಂಭಿಸುವುದಕ್ಕೂ ಶಿಕ್ಷಣದ ಗುಣಮಟ್ಟ, ವಿಸ್ತರಣ, ಆಡಳಿತ ವ್ಯವಸ್ಥೆ ಈ ಮುಖವಾದ ಪ್ರಗತಿಗೂ ಅನುಕೂಲ ಮಾಡಿಕೊಟ್ಟಿದೆ.

	ಇತಿಹಾಸ : ಸ್ಪೇನಿನವರ ಆಕ್ರಮಣ ಆರಂಭವಾಗುವ ಮುನ್ನ-ಎಂದರೆ 16ನೆಯ ಶತಮಾನದ ನಡುಗಾಲದ ವರೆಗೆ-ಚಿಲಿಯಲ್ಲಿ ಸುಮಾರು 5 ಲಕ್ಷ ಇಂಡಿಯನರು ನೆಲಸಿದ್ದರು. ಭಾಷೆ-ಬುಡಕಟ್ಟುಗಳ ದೃಷ್ಟಿಯಿಂದ ಇವರಲ್ಲಿ ಪರಸ್ಪರ ನಿಕಟ ಸಂಬಂಧವಿತ್ತು. ಆದರೆ ಮೌಲೆ ನದಿಯ ಉತ್ತರದಲ್ಲಿದ್ದವರು ಸಾಂಸ್ಕøತಿಕವಾಗಿ ಉಳಿದವರಿಗಿಂತ ಮುಂದುವರಿದಿದ್ದರು. ಇನ್‍ಗ್ಕ ಸಾಮ್ರಾಜ್ಯದ ಭಾಗವಾಗಿದ್ದ ಕ್ವೆಚುವಗಳ ಮತ್ತು ಪೆರುವಿನ ಚಿಂಚರ ಪ್ರಭಾವ ಅವರ ಮೇಲೆ ಬಿದ್ದಿತ್ತು.

	1536-37ರಲ್ಲಿ ಸ್ಪ್ಯಾನಿಷರು ಚಿಲಿಯ ಆಕ್ರಮಣವನ್ನಾರಂಭಿಸಿದರು. ಡೀಗೊಡ ಆಲ್ಮಾಗ್ರೊ ಎಂಬುವನು ಮೌಲೆ ನದಿಯ ವರೆಗೂ ತನ್ನ ಸೇನೆಯೊಂದಿಗೆ ಮುನ್ನಡೆದ. ಪೆರುವಿನಂಥ ಇನ್ನೊಂದು ನಾಡನ್ನು ಕಂಡುಹಿಡಿಯುವುದು ಅವನ ಉದ್ದೇಶವಾಗಿತ್ತು. ಆದರೆ ಅವನ ನಿರೀಕ್ಷೆ ನಿಜವಾಗಲಿಲ್ಲ. ಆಲ್ಮಾಗ್ರೊನ ಜೊತೆಗಾರ ಫ್ರಾನ್ಸಿಸ್ಕೊ ಪಿಜಾರೊ. ಆಲ್ಮಾಗ್ರೊ ತೀರಿಕೊಂಡ ಮೇಲೆ ಪಿಜಾರೊ 1540-41ರಲ್ಲಿ ಪೆಡ್ರೊ ಡ ವಾಲ್ಡೀಯ ಎಂಬುವವನಿಗೆ ಈ ಪ್ರದೇಶವನ್ನು ಗೆದ್ದು ವಸಾಹತಾಗಿ ಮಾಡಲು ಅನುಮತಿ ನೀಡಿದ. ಇವನು ತನ್ನ ಅನುಚರರೊಂದಿಗೆ ಚಿಲಿಯನ್ನು 1540ರ ಅಂತ್ಯದಲ್ಲಿ ಪ್ರವೇಶಿಸಿ, 1541ರಲ್ಲಿ ಸಾಂಟಿಯಾಗೋವನ್ನು ಸ್ಥಾಪಿಸಿದ. ಆದರೆ ಅಲ್ಲಿಯ ಇಂಡಿಯನರು ಕೊಡುತ್ತಿದ್ದ ಕಿರುಕುಳದಿಂದ ಮುಂದಿನ ಎರಡು ದಶಕಗಳಲ್ಲಿ ನೆಲೆಸಿಗರ ಜೀವನ ಅಪಾಯಕರವಾಗಿತ್ತು. ನೆಲಸು ನಾಡಿನಲ್ಲಿ ರಕ್ಷಣಾ ಭರವಸೆ ಮೂಡುವ ಮೊದಲೇ ಆಕ್ರಮಣಕಾರರು ಭೂಮಿಯನ್ನು ತಮ್ಮತಮ್ಮಲ್ಲಿ ಹಂಚಿಕೊಂಡು ಸ್ಥಿರಾಸ್ತಿ ಪದ್ಧತಿಯನ್ನು ಪ್ರಾರಂಭಿಸಿದರು.

	ಬೀವೊ-ವೀವೊ ನದಿಯ ದಕ್ಷಿಣದ ಪ್ರದೇಶದ ಆಕ್ರಮಣವನ್ನು 1550ರಲ್ಲಿ ವಾಲ್ಡೀವಿಯ ಆರಂಭಿಸಿದ. ಕೋಟೆಗಳನ್ನು ಕಟ್ಟಿಸಿದ. ತಮ್ಮ ನೆಲವನ್ನು ಆಕ್ರಮಿಸಿಕೊಂಡು ತಮ್ಮ ಇರವಿಗೇ ಮುಳಿವಾಗಿದ್ದ ಸ್ಪ್ಯಾನಿಷರ ವಿರುದ್ಧ ಇಂಡಿಯನರು ಬಂಡಾಯ ಹೂಡಿದರು. ಕದನವೊಂದರಲ್ಲಿ ವಾಲ್ಡೀವಿಯ ಸೆರೆಸಿಕ್ಕಿ ಸತ್ತ. ಇಂಡಿಯನರ ಪ್ರತಿಭಟನೆ ಬಹಳ ಕಾಲ ಮುಂದುವರಿಯಿತು. 16ನೆಯ ಶತಮಾನದ ಕೊನೆಯ ವೇಳೆಗೆ ಇತರ ದೇಶಗಳವರೂ ಈ ಪ್ರದೇಶದಲ್ಲಿ ಆಸಕ್ತಿ ತೋರಿಸಿದರು. ಫ್ರಾನ್ಸಿಸ್ ಡ್ರೇಕ್, ಥಾಮಸ್ ಕ್ಯಾವೆಂಡಿಷ್ ಮುಂತಾದ ಇಂಗ್ಲಿಷ್ ಕಡಲ್ಗಳ್ಳರೂ ದರೋಡೆಕಾರರೂ ಡಚ್ ಸಾಹಸಿಗಳೂ ಇದರ ತೀರದ ಬಳಿ ಪದೇಪದೇ ದಾಳಿ ನಡೆಸುತ್ತಲೇ ಇದ್ದರು.

	ಚಿಲಿಯಲ್ಲಿ ಅಮೂಲ್ಯ ಲೋಹಗಳು ಅಷ್ಟೇನೂ ದೊರಕಲಿಲ್ಲವಾದ್ದರಿಂದ ನೆಲೆಸಿಗರು ವ್ಯವಸಾಯವನ್ನು ಅವಲಂಬಿಸಬೇಕಾಯಿತು. ಅವರು ಬೆಳೆದ ದವಸಧಾನ್ಯಗಳು ಅವರಿಗೆ ಸಾಕಾಗುತ್ತಿದ್ದುವೇ ವಿನಾ ರಫ್ತಿಗೆ ಅವಕಾಶವಿರಲಿಲ್ಲ. ಸ್ಪೇನಿಗೆ ಈ ವಸಾಹತು ಲಾಭಪ್ರದವಾಗಿರಲಿಲ್ಲ.

	ಇಲ್ಲಿಯ ಆಡಳಿತ ಮತ್ತು ರಕ್ಷಣಾ ವೆಚ್ಚಕ್ಕಾಗಿ ಪ್ರತಿವರ್ಷವೂ ಸ್ಪೇನ್ ಸರ್ಕಾರ ಸಹಾಯದ್ರವ್ಯ ನೀಡಬೇಕಾಗುತ್ತಿತ್ತು. ನೆಲಸುಗಾರರು ಸ್ವತಃ ಬೇಸಾಯನಿರತರಾಗಬೇಕಾಗಿತ್ತು. ಆ ಪ್ರದೇಶ ನೀಗ್ರೋಗಳನ್ನು ನೇಮಿಸಿಕೊಳ್ಳುವಷ್ಟು ಐಶ್ವರ್ಯಯುಕ್ತವಾಗಿರಲಿಲ್ಲ. ಇಂಡಿಯನರ ಸಹಕಾರವನ್ನು ನಿರೀಕ್ಷಿಸುವಂತಿರಲಿಲ್ಲ. 16ನೆಯ ಶತಮಾನದ ಕೊನೆಯ ವೇಳೆಗೆ ಇಲ್ಲಿ ಸುಮಾರು 5,000 ಸ್ಪ್ಯಾನಿಷರು ನೆಲೆಸಿದ್ದರು.

	ಚಿಲಿಯ ಆಡಳಿತ ಮತ್ತು ಧಾರ್ಮಿಕ ವ್ಯವಸ್ಥೆ ಅವರ ನೆರೆರಾಜ್ಯಗಳಿಗೆ ಸರಿಸಮನಾಗಿತ್ತು. ಆಡಳಿತ ನಿರ್ವಹಣೆಗೆ ನೇಮಿಸಲಾಗಿದ್ದ ಅಧಿಕಾರಿಗಳು ಸಾಮಾನ್ಯ ದರ್ಜೆಯವರು. ಸ್ಪೇನಿನ ದೊರೆ ಮತ್ತು ರೋಮನ್ ಕ್ಯಾತೊಲಿಕ್ ಚರ್ಚ್ ಎರಡೂ ಇಲ್ಲಿಯ ನೆಲಸುಗಾರರ ಮೇಲೆ ಪ್ರಭುತ್ವ ಸ್ಥಾಪಿಸಿದುವು. ನೆಲಸಿಗರಿಗೆ ಆಡಳಿತ ಸ್ವಾತಂತ್ರ್ಯ ಇರಲಿಲ್ಲ.

	1600ರ ಅನಂತರ ಚಿಲಿಯಲ್ಲಿ ಸಂಭವಿಸಿದ ಮಹತ್ವದ ಸಾಮಾಜಿಕ ಬೆಳವಣಿಗೆಯೆಂದರೆ ಇಂಡಿಯನ್-ಯೂರೋಪಿಯನ್ ಮಿಶ್ರ ತಳಿಯ ಜನರ ಸಂಖ್ಯೆಯ ವೃದ್ಧಿ, ಇವರಿಗೆ ಮೆಸ್ಟಿಜೊ ಎಂದು ಹೆಸರು. ವಸಾಹತು ಕಾಲದ ಅಂತ್ಯದ ವೇಳೆಗೆ ಅಲ್ಲಿದ್ದ ಜನಸಂಖ್ಯೆಯಾದ 5,00,000ದಲ್ಲಿ 3,00,000ಮೆಸ್ಟಿಜೊಗಳು 1,50,000 ಮಂದಿ ಕ್ರಿಯೋಲ್‍ಗಳು (ಚಿಲಿಯಲ್ಲಿ ಜನಿಸಿದ ಐರೊಪ್ಯ ವಂಶೀಯರು). ಸ್ಪೇನಿನಿಂದ ಹೊಸದಾಗಿ ಬಂದಿದ್ದವರು (ಪೆನಿನ್ಸುಲರ್ಸ್) 20,000 ಮಂದಿ. ಸುಮಾರು 10,000 ನಿಗ್ರೋಗಳಿದ್ದರು. ಚಿಲಿಯ ಜನರಲ್ಲಿ ಬಹು ಸಂಖ್ಯಾತರು ನೆಲೆಸಿದ್ದು ಸಾಂಟಿಯಾಗೋದಿಂದ ಕಾನ್ಸೆಪ್ಸಿಯಾನ್ ವರೆಗಿನ ಪ್ರದೇಶದಲ್ಲಿ. ಇದು ಚಿಲಿಯನ್ ರಾಷ್ಟ್ರೀಯತೆಯ ತೊಟ್ಟಿಲೆನಿಸಿತು.

	ಶಿಕ್ಷಣಕ್ಷೇತ್ರದಲ್ಲಿ ಕ್ಯಾತೊಲಿಕರ ಏಕಸ್ವಾಮ್ಯವಿತ್ತು. ಹೆಚ್ಚಿನ ಶಿಕ್ಷಣ ಸೌಲಭ್ಯಗಳಿರಲಿಲ್ಲ. 19ನೆಯ ಶತಮಾನದ ಆರಂಭದ ವರೆಗೂ ಚಿಲಿ ಬೌದ್ಧಿಕವಾಗಿ ಹಿಂದುಳಿದಿತ್ತು. 1818ರಲ್ಲಿ ಸ್ಪೇನಿನಿಂದ ಸ್ವಾತಂತ್ರ್ಯ ಗಳಿಸಿದ ಸಮಯದಲ್ಲೂ ಚಿಲಿಯಲ್ಲಿ ಒಂದು ಮುದ್ರಣಾಲಯ ಕೂಡ ಇರಲಿಲ್ಲ. ನಾಗರಿಕ ಪ್ರಪಂಚದೊಡನೆ ಹೆಚ್ಚು ಸಂಪರ್ಕವೇ ಬೆಳೆದಿರಲಿಲ್ಲ.
19ನೆಯ ಶತಮಾನದ ಆದಿಭಾಗದ ವೇಳೆಗೆ ಚಿಲಿಯಲ್ಲಿ ಜನಜಾಗೃತಿ ಉಂಟಾಗಿತ್ತು. ಉಳಿದ ಪ್ರಪಂಚದಿಂದ ಚಿಲಿ ಪ್ರತ್ಯೇಕವೆನಿಸಿದರೂ ಅಮೆರಿಕದ ಸ್ವಾತಂತ್ರ್ಯ, ಫ್ರಾನ್ಸಿನ ಕ್ರಾಂತಿ, ಅಮೆರಿಕದ ನೆಲದಿಂದ ಸ್ಪೇನಿನ ಹಿನ್ನಡೆ, ಚಿಲಿಯ ತೀರದಲ್ಲಿ ಬ್ರಿಟನ್ ಮತ್ತು ಅಮೆರಿಕ ನಡೆಸುತ್ತಿದ್ದ ನಿಷಿದ್ಧ ವ್ಯಾಪಾರ-ಇವು ಚಿಲಿಯನರ ಗಮನಕ್ಕೆ ಬಂದಿದ್ದವು. 1808ರಲ್ಲಿ ನೆಪೋಲಿಯನ್ ಸ್ಪೇನಿನ ವ್ಯವಹಾರಗಳಲ್ಲಿ ಕೈಹಾಕಿದಾಗ ಚಿಲಿಯ ಜನ ಸ್ವಾವಲಂಬಿಗಳಾಗುವುದು ಅನಿವಾರ್ಯವಾಯಿತು. ಅವರು ಆಗ ಸ್ವಯಮಾಡಳಿತದ ಹಾದಿಯಲ್ಲಿ ಮೊದಲ ಹೆಜ್ಜೆ ಇಟ್ಟರು. ಬಹಿರಂಗ ಪುರಜನ ಸಭೆಯೊಂದು 1810ರ ಸೆಪ್ಟೆಂಬರ್ 18ರಂದು ಸೇರಿ, ಚಿಲಿಯ ಅಧ್ಯಕ್ಷ-ರಾಜ್ಯಪಾಲನ ರಾಜೀನಾಮೆಯನ್ನು ಅಂಗೀಕರಿಸಿ ಅವನ ಸ್ಥಾನದಲ್ಲಿ ಆಡಳಿತ ಸಭೆಯೊಂದನ್ನು ಚುನಾಯಿಸಿತು.

ಮೊದಲ ಮೂರು ವರ್ಷ ಚಿಲಿಯನರ ಹೋರಾಟ ಶಾಂತಿಯುತವಾಗಿತ್ತು. ವ್ಯಾಪಾರ ನಿರ್ಬಂಧಗಳು ಸಡಿಲವಾದವು. ಗುಲಾಮಗಿರಿಯನ್ನು ತೊಡೆದುಹಾಕಲು ಪ್ರಯತ್ನಗಳು ನಡೆದುವು. ದೇಶಭಕ್ತರ ಆಶೋತ್ತರಗಳನ್ನು ಪ್ರಚುರಪಡಿಸಲು ವೃತ್ತಪತ್ರಿಕೆ ಆರಂಭವಾಯಿತು. ವಿಧ್ಯಾಭ್ಯಾಸದ ಉತ್ತೇಜನಕ್ಕಾಗಿ ಇನ್ಸ್ಟಿಟೂಟೋ ನ್ಯಾಷನಲ್ ಎಂಬ ಸಂಸ್ಥೆ ಜನ್ಮತಾಳಿತು. ಆದರೆ ಆಂತರಿಕ ಭಿನ್ನತೆಗಳ ಪ್ರವೃತ್ತಿಗಳೂ ಬೆಳೆದವು. ಸ್ವಯಮಾಡಳಿತದ ಹಾದಿಯಲ್ಲಿ ಎಷ್ಟು ದೂರ ಹೋಗಬಹುದೆಂಬ ಬಗ್ಗೆ ಕ್ರಿಯೋಲರಲ್ಲಿ ಒಮ್ಮತವಿರಲಿಲ್ಲ. ಅದೇ ಸಮಯಕ್ಕೆ ಸ್ಪೇನ್ ಮತ್ತೆ ಚಿಲಿಯ ಮೇಲೆ ತನ್ನ ಅಧಿಕಾರ ಸ್ಥಾಪಿಸಿತು (1814). ಸೋತ ಹೋರಾಟಗಾರರು ಆರ್ಜೆಂಟೀನಕ್ಕೆ ಓಡಿಹೋದರು. ಅವರು 1817ರಲ್ಲಿ ಬಲವಾದ ಸೈನ್ಯದೊಡನೆ ಆಂಡೀಸನ್ನು ದಾಟಿ ಬಂದು, ಚಾಕಲಾಂಕೊ ಬೆಟ್ಟದ ಮೇಲೆ ಸ್ಪೇನಿನ ಸೇನೆಯೊಂದಿಗೆ ಕದನ ನಡೆಸಿ (ಫೆಬ್ರವರಿ 12,1817) ಅದನ್ನು ಸೋಲಿಸಿದರು. ಅವರು ಸಾಂತಿಯಾಗೋ ಕಡೆಗೆ ಮುನ್ನುಗ್ಗಿದರು. ಓ ಹಿಗಿನ್ಸ್ ಚಿಲಿಯ ಮಹಾನಿರ್ದೆಶಕನಾದ. 1818ರ ಫೆಬ್ರವರಿ 12ರಂದು ಚಿಲಿಯ ಸ್ವಾತಂತ್ರ್ಯದ ಘೋಷಣೆಯಾಯಿತು. 1818ರ ಏಪ್ರಿಲ್ 5ರ ವೇಳೆಗೆ ಸ್ಪೇನಿನ ರಾಜಭಕ್ತರ ಸೇನೆ ಸಂಪೂರ್ಣವಾಗಿ ಸೋತಿತು. 

ಆದರೆ ಚಿಲಿಯಲ್ಲಿ ಅಂತಃಕಲಹಗಳು ಮುಂದುವರಿದುವು. ಓ ಹಿಗಿನ್ಸ್‍ಗೆ ಪ್ರತಿಸ್ಪರ್ಧಿಯಾಗಿದ್ದ ಜೋಸ್ ಮಿಗ್ವೆಲ್ ಕಾರೆರಾನ ಸೋದರರಿಬ್ಬರು ಕೊಲ್ಲಲ್ಪಟ್ಟರು (1818). ಕಾರೆರಾನಿಗೂ 1821ರಲ್ಲಿ ಅದೇ ಗತಿ ಸಂಭವಿಸಿತು. ಸ್ವಾತಂತ್ರ್ಯ ಹೋರಾಟ ಮುಂದುವರಿದಂತೆ ಚಿಲಿಯ ಆರ್ಥಿಕ ಸ್ಥಿತಿ ಹದಗೆಡುತ್ತ ಬಂತು. ಓ ಹಿಗಿನ್ಸನ ಸರ್ವಾಧಿಕಾರ ಮುಂದುವರಿಯಿತು. ಜನರ ಅಸಮಾಧಾನ ಅತಿಯಾದಾಗ ಅವನು ರಾಜೀನಾಮೆ ಕೊಟ್ಟು (1823) ಪೆರುವಿಗೆ ನಿರ್ಗಮಿಸಿದ. 
ಆ ಸಮಯದಲ್ಲಿ ರಾಮೊನ್ ಫ್ರೆಯೆರ್ ಅಧಿಕಾರ ಹಿಡಿದುಕೊಂಡ. ನೀಗ್ರೋ ಗುಲಾಮಗಿರಿಯನ್ನು ಅವನು ತೆಗೆದುಹಾಕಿದ. ಸಂಯುಕ್ತರಾಜ್ಯವನ್ನು ಜಾರಿಗೆ ತರುವ ಸಂವಿಧಾನ 1826ರಲ್ಲಿ ಆಚರಣೆಗೆ ಬಂತು. ಇದರಿಂದಾಗಿ 1827ರಲ್ಲಿ ಫ್ರೆಯೆರನ ಅಧಿಕಾರ ಹೋಯಿತು. ಆದರೆ ಚುನಾವಣೆಯಲ್ಲಿ ಫ್ರೆಯೆರನಿಗೆ ಪರವಾಗಿದ್ದ ಅಧ್ಯಕ್ಷನೂ ಕಾಂಗ್ರೆಸ್ಸೂ ಆಯ್ಕೆಯಾದ್ದರಿಂದ ಅವನ ಪ್ರಭಾವ ಮತ್ತೆ ಹೆಚ್ಚಿತು.

1828ರಲ್ಲಿ ಉದಾರ ದೃಷ್ಟಿಯ ಸಂವಿಧಾನವನ್ನು ಘೋಷಿಸಲಾಯಿತು. ಚಿಲಿಯಲ್ಲಿ ಪಿಲುಕೋನ್ಸ್ (ಸಂಪ್ರದಾಯವಾದಿಗಳು ಮತ್ತು ಕ್ಯಾತೊಲಿಕರು) ಮತ್ತು ಪಿಪಿಯೊಲೋಸ್ (ಉದಾರವಾದಿಗಳು ಮತ್ತು ಪಾದ್ರಿವಿರೋಧಿಗಳು) ಎಂದು ಎರಡು ಪಕ್ಷಗಳಾದುವು. ಈ ಪಕ್ಷಗಳ ನಡುವೆ ಕದನ ನಡೆದು ಕೊನೆಗೆ ಪಿಲುಕೋನ್ಸ್ ಗೆದ್ದರು (1830).
ಸಂಪ್ರದಾಯವಾದಿಗಳು 1831 ರಿಂದ 1861ರ ವರೆಗೆ ಪ್ರಬಲರಾಗಿದ್ದರು. ದೇಶದಲ್ಲಿ ಸ್ಥಿರತೆ ಏರ್ಪಟ್ಟಿತ್ತು. 1830ರ ದಶಕದಲ್ಲಿ ಅಧ್ಯಕ್ಷನಾಗಿದ್ದಾತ ಜೋಕ್ವಿನ್ ಪ್ರೀಟೊ. ಆದರೆ ಡೀಗೊ ಪೋರ್ಟೇಲ್ಸ್ ಪ್ರಬಲ ವ್ಯಕ್ತಿಯಾಗಿದ್ದ. ಅವನು ಮಂತ್ರಿಯಾಗಿರಲಿ, ಸರ್ಕಾರದ ಹೊರಗೇ ಇರಲಿ, ಅವನ ಮಾತೇ ನಡೆಯುತ್ತಿತ್ತು. 1837ರಲ್ಲಿ ಅವನು ಕೊಲೆಗೆ ಈಡಾದ. ಅವನಿಗೆ ಬಡಜನರಲ್ಲೂ ಪ್ರಜಾಪ್ರಭುತ್ವದಲ್ಲೂ ತುಚ್ಛಭಾವವಿತ್ತು. ಆಡಳಿತದಲ್ಲಿ ಕಳೆದುಹೋಗಿದ್ದ ಚರ್ಚ್‍ಪ್ರಭಾವವನ್ನು ಮತ್ತೆ ಅವನು ಪ್ರತಿಷ್ಠಾಪಿಸಿದ. ಸರ್ಕಾರದಲ್ಲಿ ಚರ್ಚಿನ ಪಾಲುಗಾರಿಕೆ ಏರ್ಪಟ್ಟಿತು. ಅವನು ವಿದೇಶಿ ಬಂಡವಾಳಕ್ಕೆ ಸ್ವಾಗತ ನೀಡಿದ. ವರಿಷ್ಠರ ಆಡಳಿತಕ್ಕೆ ಮನ್ನಣೆ ನೀಡುವ ಸಂವಿಧಾನ 1833ರಲ್ಲಿ ಜಾರಿಗೆ ಬಂತು. ಇದು ಕೆಲವು ತಿದ್ದುಪಡಿಗಳೊಡನೆ 1825ರ ವರೆಗೂ ಜಾರಿಯಲ್ಲಿತ್ತು. ಜನಸಾಮಾನ್ಯರ ಶಿಕ್ಷಣಕ್ಕೆ ಅವನು ಮಾನ್ಯತೆ ನೀಡಲಿಲ್ಲವಾದರೂ ವಿದ್ವಾಂಸರನ್ನೂ ಸಾಹಿತಿಗಳನ್ನೂ ಅವನು ಪ್ರೋತ್ಸಾಹಿಸಿದ. ಹೊರದೇಶಗಳಿಂದ ವಿದ್ವಾಂಸರನ್ನು ಬರಮಾಡಿಕೊಂಡ.
ಬೊಲಿವಿಯದ ಸರ್ವಾಧಿಕಾರಿ ತನ್ನ ರಾಜ್ಯವನ್ನು ಪೆರು ರಾಜ್ಯವನ್ನೂ ಕೂಡಿಸಿ ಸಂಯುಕ್ತ ರಾಜ್ಯವನ್ನಾಗಿ ಮಾಡಲು ಯತ್ನಿಸಿದಾಗ ಇದರಿಂದ ಚಿಲಿಗೆ ಅಪಾಯವಿದೆಯೆಂದು ಪೋರ್ಟೇಲ್ಸ್ ಬಗೆದು ಅದರೊಂದಿಗೆ ಯುದ್ಧ ಹೂಡಿದ (1836-39). ಯುದ್ಧವಿರೋಧಿಗಳನ್ನು ದಮನ ಮಾಡಿದ. ದಂಗೆಯೆದ್ದ ಸೈನಿಕರು 1837ರ ಜೂನಿನಲ್ಲಿ ಅವನನ್ನು ಕೊಲೆ ಮಾಡಿದರು. ಇದರಿಂದ ಚಿಲಿಯಲ್ಲಿ ಐಕ್ಯಮತ ಸಾಧಿಸಿತು. ಯುದ್ಧದಲ್ಲಿ ಅದಕ್ಕೆ ಜಯ ಲಭಿಸಿತು. ಇದರಿಂದ ಪಶ್ಚಿಮ ತೀರದಲ್ಲಿ ಚಿಲಿಯ ಪ್ರಭಾವ ಬೆಳೆಯಿತು.

ಪೋರ್ಟೇಲ್ಸನ ಅನಂತರ ಚಿಲಿ ಶಾಂತಿ-ಪ್ರಗತಿಗಳತ್ತ ಮುನ್ನಡೆಯಿಟ್ಟಿತು. ಅಶಾಂತಿ ಅರಾಜಕತೆಗಳಿಂದ ಕೂಡಿದ್ದ ರಾಜ್ಯಗಳ ನಡುವೆ ಆರ್ಥಿಕವಾಗಿ ರಾಜಕೀಯವಾಗಿ ಸುಭದ್ರವಾಗಿದ್ದ ರಾಷ್ಟ್ರ ಇದೊಂದೇ. ನೂತನ ಅಧ್ಯಕ್ಷ ಮ್ಯಾನ್ಯುಯೆಲ್ ಬುಲ್ನಿಸ್ ಕಾಲದಲ್ಲಿ (1841-1851) ಆರ್ಥಿಕ ಹಾಗೂ ಬೌದ್ಧಿಕವಾಗಿ ಚಿಲಿ ಮತ್ತೊಂದು ಹೆಜ್ಜೆ ಇಟ್ಟಿತು. ಸಾರ್ವಜನಿಕ ಸಾಲವನ್ನು ತೀರಿಸಲಾಯಿತು. ಕಟ್ಟಳೆಗಳನ್ನು ನಿರ್ದೇಶಿಸಲಾಯಿತು. ಸಾರಿಗೆಗಾಗಿ ನೌಕೆಗಳು ನಿರ್ಮಾಣವಾದುವು. ಹಿಟ್ಟಿನ ಗಿರಣಿಗಳು ಸ್ಥಾಪನೆಯಾದುವು. ಕಲ್ಲಿದ್ದಲು ಗಣಿಗಳನ್ನು ತೆರೆಯಲಾಯಿತು. ಅಮೂಲ್ಯ ಹಾಗೂ ಇತರ ಲೋಹಗಳ ಉತ್ಪನ್ನ ಹೆಚ್ಚಿತು. 1843ರಲ್ಲಿ ವಿದ್ಯಾಶಾಲೆ ಹಾಗೂ ವಿಶ್ವವಿದ್ಯಾಲಯವೂ ಸಂಗೀತ, ವಾಸ್ತು ಮತ್ತು ಇತರ ಕಲೆಗಳ ಅಧ್ಯಯನಕ್ಕೆ ಶಾಲೆಗಳೂ ಸ್ಥಾಪಿತವಾದವು. ವೃತ್ತಪತ್ರಿಕೆಗಳು ಮತ್ತು ನಿಯತಕಾಲಿಕ ಪತ್ರಿಕೆಗಳು ಚಿಲಿಯ ಬುದ್ಧಿಜೀವಿಗಳಿಗೆ ವಾದಸಾಧನವಾದುವು.
ಮ್ಯಾನ್ಯುಯೆಲ್ ಬುಲ್‍ನಿಸ್ ಮಂತ್ರಿಮಂಡಲದಲ್ಲಿ ಶಿಕ್ಷಣ ಸಚಿವನಿಗಿದ್ದ ಮ್ಯಾನ್ಯುಯೆಲ್ ಮಾಂಟ್ ಅನಂತರ ಅಧ್ಯಕ್ಷನಾದ (1851-1861). ಅವನು ವ್ಯವಸಾಯಕ್ಕೆ ಹೆಚ್ಚಿನ ಆದ್ಯತೆ ನೀಡಿದನಲ್ಲದೆ, ರೈಲ್ವೆ, ತಂತಿ ಮುಂತಾದವುಗಳ ವ್ಯವಸ್ಥೆ ಮಾಡಿದ. ಚಿಲಿಯ ಕಾನೂನುಗಳು ಕ್ರೋಢೀಕರಿಸಲ್ಪಟ್ಟುವು. ಪರಿಣಿತ ಕುಶಲಕಲಾವಿದರಿಗೆ ಅವನು ಹಣ ಸಹಾಯ ಮಾಡಿದ. ಆದರೆ ಬುದ್ಧಿಜೀವಿಗಳ ಸ್ವಾತಂತ್ರ್ಯವನ್ನು ಕಸಿದುಕೊಂಡ. ಇವನೊಂದಿಗೆ ಚಿಲಿಯ 30 ವರ್ಷಗಳ ಸರ್ವಾಧಿಕಾರ ಕೊನೆಗೊಂಡಿತು.
ಉದಾರವಾದಿಗಳು ಮತ್ತು ಸಂಪ್ರದಾಯಸ್ಥರು ಒಂದಾಗಿ ಜೋಸ್ ಜೋಕ್ವಿನ್ ಪಿರಜ್‍ನ ಅಧ್ಯಕ್ಷತೆಗೆ (1861-1871) ಬೆಂಬಲ ನೀಡಿದುವು. ಈ ಕಾಲದ ಮುಖ್ಯ ಬೆಳವಣಿಗೆ ಎಂದರೆ ಮಧ್ಯಮವರ್ಗದ ವ್ಯಾಪಕತೆ. ಮಧ್ಯಮ ಹಾಗೂ ಕಾರ್ಮಿಕ ವರ್ಗಗಳು ಬೆಳೆದುವು. ತಂತ್ರಶಾಸ್ತ್ರ ಮತ್ತು ಪ್ರೌಢ ವಿದ್ಯಾಭ್ಯಾಸಕ್ಕೆ ಉತ್ತೇಜನ ದೊರಕಿತು.

ಫೆಡರಿಕೊ ಎರಾಜûುರಿeóï ಜûನಾರ್ಟು ಅಧ್ಯಕ್ಷತೆಯ (1871-76) ಅವಧಿಯಲ್ಲಿ ಸುಧಾರಣಾ ಕಾರ್ಯ ತೀವ್ರವಾಯಿತು. ಅಧ್ಯಕ್ಷನ ಅಧಿಕಾರವನ್ನು ಇನ್ನಷ್ಟು ಮಿತಿಗೊಳಿಸಲಾಯಿತು. ಅಲ್ಪ ಸಂಖ್ಯಾತರಿಗೆ ಪ್ರಾತಿನಿಧ್ಯ ಸಿಕ್ಕಿತು. ಚರ್ಚಿನ ಅಧಿಕಾರವನ್ನು ಸೀಮಿತಗೊಳಿಸಲಾಯಿತಲ್ಲದೆ ಅದರ ಅಧಿಕಾರಿಗಳು ಶಿಕ್ಷೆಗೆ ಒಳಪಡುವಂತಾಯಿತು. ಚಿಲಿ ವಿಶ್ವವಿದ್ಯಾಲಯ ವಿಸ್ತರಿಸಿತು. ಸಾಂತಿಯಾಗೋ ಆಧುನಿಕ ನಗರವಾಗಿ ಬೆಳೆಯಿತು.

ಅನಿಬಾಲ್ ಬಂಟೊ ಅಧ್ಯಕ್ಷತೆಯ ಕಾಲದಲ್ಲಿ ಸಂಭವಿಸಿದ ವಿಶ್ವ ಆರ್ಥಿಕ ಮುಗ್ಗಟ್ಟಿನ ಪರಿಣಾಮ ಚಿಲಿಯ ಮೇಲೂ ಉಂಟಾಯಿತು. ಇದರಿಂದ ಚೇತರಿಸಿಕೊಳ್ಳುವ ಮೊದಲೇ ಬೊಲಿವಿಯ ಮತ್ತು ಪೆರುವಿನೊಂದಿಗೆ ನೈಟ್ರೇಟ್ ಕ್ಷೇತ್ರಗಳ ವಿಚಾರದಲ್ಲಿ ವಾದವುಂಟಾಗಿ ಅದು ಯುದ್ಧದಲ್ಲಿ ಪರ್ಯವಸಾನವಾಯಿತು. ಈ ಯುದ್ಧದಲ್ಲಿ (1833) ಜಯ ಗಳಿಸಿದ ಚಿಲಿಗೆ ಪೆರುವಿನ ಕೆಲವು ಪ್ರಾಂತ್ಯಗಳ ತಾತ್ಕಾಲಿಕ ಹತೋಟಿ ಸಿಕ್ಕಿತಲ್ಲದೆ ಅದರ ಆದಾಯವೂ ಹೆಚ್ಚಾಯಿತು.

1881ರಲ್ಲಿ ಡೊಮಿಂಗೊ ಸಾಂತ ಮರಿಯ ಅಧ್ಯಕ್ಷನಾದ. ಅವನ ಕಾಲದಲ್ಲಿ ಕಾಂಗ್ರೆಸ್ ಅಧ್ಯಕ್ಷರ ವಿಟೊ ಅಧಿಕಾರವನ್ನು  ಮತಗಳಿಂದ ಬದಿಗೊತ್ತುವ ಅಧಿಕಾರವನ್ನು ಕಾಂಗ್ರೆಸ್ ಪಡೆಯಿತು. ಸ್ಥಳೀಯ ಅಧಿಕಾರಿಗಳ ಅಧಿಕಾರವನ್ನು ಮಿತಗೊಳಿಸಲಾಯಿತು. ಮತ ಚಲಾವಣೆಗೆ ಅವಶ್ಯವಾಗಿದ್ದ ಆರ್ಥಿಕ ಅರ್ಹತೆಯನ್ನು ಸಡಿಲಗೊಳಿಸಲಾಯಿತು. ದಕ್ಷಿಣದ ಅರಾಕೆನಿಯನ್ ಇಂಡಿಯನರನ್ನು ಅವನು ದಮಿಸಿದ.
ಅನಂತರ ಬಂದ ಜೋಸ್ ಮ್ಯಾನ್ಯುಯೆಲ್ ಬಾಲ್ಮಸೀಡನ ಅಧ್ಯಕ್ಷತೆಯ ಕಾಲದಲ್ಲಿ ಚಿಲಿಯ ಜನರ ಕಷ್ಟಗಳು ಹೆಚ್ಚಿದುವು. ಅವನಿಗೆ ಕಾಂಗ್ರೆಸಿನ ಬೆಂಬಲ ತಪ್ಪಿತು. ಅವನು ಕಾಂಗ್ರೆಸನ್ನೆ ಕಡೆಗಣಿಸಿ ಸರ್ವಾಧಿಕಾರದ ದಾರಿ ಹಿಡಿದಾಗ ಕಾಂಗ್ರೆಸ್ಸು ನೌಕಾಸೇನೆಯ ಬೆಂಬಲ ಪಡೆದು. ಅಧ್ಯಕ್ಷನನ್ನು ವಜಾ ಮಾಡುವ ನಿರ್ಣಯ ಮಾಡಿತು. ಅಂತರ್ಯುದ್ಧ ಸಂಭವಿಸಿತು. ಕಾಂಗ್ರೆಸ್ ಪರವಾದ ನೌಕಾಪಡೆ ನೈಟ್ರೇಟ್ ಗಣಿಗಳನ್ನು ವಶಪಡಿಸಿಕೊಂಡಿತು. ಕೊನೆಗೆ ಕಾಂಗ್ರೆಸ್ ಜಯಗಳಿಸಿತು. ಬಾಲ್ಮಸೀಡ ಆತ್ಮಹತ್ಯೆ ಮಾಡಿಕೊಂಡ.

1891-1918ರ ಕಾಲವನ್ನು ಸಂಸತ್ತಿನ ಆಳ್ವಿಕೆಯ ಕಾಲವೆಂದು ಪರಿಗಣಿಸಬಹುದು. ಬಲಿಷ್ಠ ಅಧ್ಯಕ್ಷರಿಗೆ ಜಾಗವಿಲ್ಲವಾಯಿತು. ಅಧ್ಯಕ್ಷರ ಆಗಮನ ಮತ್ತು ನಿರ್ಗಮನ, ಮಂತ್ರಿಮಂಡಲದ ಬದಲಾವಣೆ ಇವು ಸಾಮಾನ್ಯವಾದುವು. ರಾಜಕೀಯ ಮೌಲ್ಯದಲ್ಲಿ ಇಳಿಮುಖ ಕಂಡುಬಂತು. ನೈತಿಕ ಶಿಸ್ತು, ಸಾರ್ವಜನಿಕ ಜವಾಬ್ಧಾರಿ, ಪಕ್ಷಗಳ ರೀತಿ ಹೊಲಸಾದುವು. ಮಧ್ಯಮ ವರ್ಗದವರಿಗೆ ರಾಜಕೀಯವೇ ಕಸುಬಾಯಿತು.

ಆರ್ಥಿಕ ಕ್ಷೇತ್ರದಲ್ಲಿ ಪ್ರಗತಿ, ಗಣಿ ಉದ್ಯಮ ಹಾಗೂ ನೈಟ್ರೇಟ್ ಉತ್ಪತ್ತಿ. ಹಿಚ್ಚಿನ ವಿದೇಶಿ ವಿನಿಮಯ, ಕೈಗಾರಿಕೆ ಮತ್ತು ವಾಣಿಜ್ಯಕ್ಕೆ ಹೆಚ್ಚಿನ ಉತ್ತೇಜನ, ನಗರಗಳ ಸೌಂದರ್ಯ ವರ್ಧನ, ಪಟ್ಟಣಗಳಲ್ಲಿ ಹೆಚ್ಚಿನ ಜನಸಾಂದ್ರತೆ-ಇವು ಈ ಕಾಲದ ಕೆಲವು ಪ್ರವೃತ್ತಿಗಳು. ಆರ್ಥಿಕ ಪ್ರಗತಿ ಸಮಾಜದ ಮೆಲೆ ತನ್ನ ಪ್ರಭಾವ ಬೀರಿತು. ಆರ್ಥಿಕ ಕ್ಷೇತ್ರದಲ್ಲಿ ರಾಜ್ಯ ಹಸ್ತಕ್ಷೇಪ ಮಾಡಕೂಡದೆಂಬ ಒತ್ತಾಯವಿತ್ತು.

1912ರಲ್ಲಿ ಸಮಾಜವಾದಿ ಕಾರ್ಮಿಕ ಪಕ್ಷ ಸ್ಥಾಪನೆಯಾಯಿತು. ಆದರೆ ಅದು ಹೆಚ್ಚು ಪರಿಣಾಮಕಾರಿಯಾಗಿರಲಿಲ್ಲ. ವಿಶ್ವವಿದ್ಯಾಲಯ ಮತ್ತು ಸಾರ್ವಜನಿಕ ಶಾಲೆಗಳ ಸ್ಥಾಪನೆ, ಅರ್ಹ ಉಪಾಧ್ಯಾಯರ ನೇಮಕ, ಪತ್ರಿಕಾ ಸ್ವಾತಂತ್ರ್ಯ-ಇವು ಜನರ ಮನಸ್ಸನ್ನು ಒಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. 1818ರ ಸಾರ್ವತ್ರಿಕ ಚುನಾವಣಾ ಸಮಯದಲ್ಲಿ ದೇಶದಲ್ಲಿ ಜಾಗೃತಿ ಮೂಡಿತ್ತು.
ಜನತೆಯ ಆಶೋತ್ತರಗಳ ಪ್ರತೀಕವಾಗಿ ಅಧ್ಯಕ್ಷನಾಗಿ ಆರಿಸಿ ಬಂದವನು ಆರ್ಟುರೊ ಅಲೆಸಾಂಡ್ರಿ ಪಾಲ್ಮ. ಆದರೆ ಅಧಿಕಾರಯುಕ್ತ ಹಳೆಯ ರಾಜಕಾರಣಿಗಳೇ ಮೇಲ್ಮನೆಯಿಂದ ಸೆನೆಟಿನಲ್ಲಿ ಮುಂದುವರಿದು ಅಲೆಸಾಂದ್ರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದುದರಿಂದ ಅವನು ಹೊಸ ಸಂವಿಧಾನವನ್ನು ಘೋಷಿಸಿದ. 1925ರಲ್ಲಿ ಇದಕ್ಕೆ ಲಭಿಸಿತು. ಇದರಿಂದ ಅಧ್ಯಕ್ಷನಿಗೆ ಹೆಚ್ಚಿನ ಸ್ವಾತಂತ್ರ್ಯ ಹಾಗೂ ಅಧಿಕಾರ ಸಿಕ್ಕಿದುವು. ರಾಜ್ಯ ಮತ್ತು ಚರ್ಚ್ ಬೇರ್ಪಟ್ಟುವು. ಆರ್ಥಿಕ ವಿಚಾರಗಳಲ್ಲಿ ಸರ್ಕಾರ ಪ್ರವೇಶಿಸಬಾರದೆಂಬುದು ಆಗ ಸ್ವೀಕೃತವಾಗಿದ್ದ ನೀತಿ.

ಅಲೆಸಾಂಡ್ರಿಯ ಸರ್ಕಾರದಲ್ಲಿ ಯುದ್ಧಮಂತ್ರಿಯಾಗಿದ್ದ ಇಬಾನೆeóï ಅವನನ್ನು ಪದಚ್ಯುತಿಗೊಳಿಸಿ ಅಧಿಕಾರಕ್ಕೆ ಬಂದ. ಅವನದು ಸ್ವೇಚ್ಛಾ ಪ್ರವೃತ್ತಿಯ ಆಳ್ವಿಕೆ. ಸಮಾಜದಲ್ಲಿ ಅಸಂತುಷ್ಟಿ ಹೆಚ್ಚಿತು. ವಿದೇಶಿ ವಿನಿಮಯದ ಮೂಲ ಇಂಗಿತು. ನಿರುದ್ಯೋಗ ಹೆಚ್ಚಾಯಿತು. ತೆರಿಗೆ ವಿಧಿಸುವ ಅವನ ಪ್ರಯತ್ನದಿಂದ ಕಳವಳ ಅಧಿಕವಾಯಿತು. ಕೊನೆಗೆ ಅವನು ರಾಜೀನಾಮೆಯಿತ್ತ. (1831).

1932ರಲ್ಲಿ ನಡೆದ ಕ್ಷಿಪ್ರಾಕ್ರಮಣದ ಅನಂತರದ ಚುನಾವಣೆಯಲ್ಲಿ ಪುನಃ ಅಲೆಸಾಂಡ್ರಿ ಅಧ್ಯಕ್ಷನಾದ. ಕೈಗಾರಿಕೆ ಹಾಗೂ ಖನಿಜ ಉತ್ಪತ್ತಿಯ ಹೆಚ್ಚಳದಿಂದ ಆರ್ಥಿಕ ಸ್ಥಿತಿ ಉತ್ತಮಗೊಂಡಿತು. ಆದರೆ ಅವನು ಸುಧಾರಣೆಯ ನೀತಿ ಅನುಸರಿಸಲಿಲ್ಲವಾದ್ದರಿಂದ, ಅವನಿಗೆ ಬೆಂಬಲ ನೀಡಿದ್ದ ತೀವ್ರವಾದಿ ಪಕ್ಷ ತನ್ನ ಬೆಂಬಲವನ್ನು ಹಿಂದೆಗೆದುಕೊಂಡಿತು. ಎರಡು ವರ್ಷಗಳ ಕಾಲ ಅನಿಶ್ಚಯ ಪರಿಸ್ಥಿತಿಯಿತ್ತು. 1936ರ ವೇಳೆಗೆ ಅದರ ಮತ್ತು ಮಧ್ಯ ಹಾಗೂ ವಾಮ ಗುಂಪುಗಳ ಸಹಯೋಗ ಏರ್ಪಟ್ಟು ಜನಪ್ರಿಯರಂಗ ಸ್ಥಾಪಿತವಾಯಿತು. ಅದರ ಮುಂದಾಳು ಪೇಡ್ರೊ ಅಗ್ವಿರೆ ಸೆರ್ಡ ಅಧ್ಯಕ್ಷನಾದ (1938).

ಆರ್ಥಿಕ ಪ್ರಗತಿ ಮುಂದುವರಿಯಿತು. ಕೈಗಾರಿಕೆಗೆ ಸರ್ಕಾರ ಬೆಂಬಲ ನೀಡಿತು. 1941 ತೀರಿಕೊಂಡ ವಾಮ ಪಂಥೀಯ ಉದಾರವಾದಿಗಳಿಗೂ ಕಮ್ಯುನಿಸ್ಟರಿಗೂ ನಡುವೆ ಕಲಹಗಳು ಆರಂಭವಾದುವು. ವಾನ್ ಆಂಟೋನಿಯೊ ರೀಯೋಸ್ ಚಿಲಿಯ ಅಧ್ಯಕ್ಷನಾದ (1942-46). ಅಮೆರಿಕದೊಂದಿಗೆ ಸಂಬಂಧ ಬೆಳೆಯಿತು. 1946ರಲ್ಲಿ ರೀಯೋಸ್ ತೀರಿಕೊಂಡ. ಅವನ ಕಾಲದಲ್ಲಿ ಕೈಗಾರಿಕೆಗಳಿಗೆ ಪ್ರಾಮುಖ್ಯ ಸಂದಿತ್ತಾದರೂ ಸಾಮಾಜಿಕ ಪ್ರಗತಿಗೆ ಪ್ರಶಾಸ್ತ್ಯ ಇರಲಿಲ್ಲ. ಅನಂತರ ಬಂದ ಗೆಬ್ರಿಯೆಲ್ ಗೊeóÁಲೆeóï ವಿಡೆಲ ಕೂಡ ಜನರ ನಿರೀಕ್ಷೆಯನ್ನು ಸಾರ್ಥಕಗೊಳಿಸಲಿಲ್ಲ. ಅವನಿಗೆ ಬೆಂಬಲ ನೀಡಿದ್ದ ಕಮ್ಯೂನಿಸ್ಟರು ಹಿಂದೆ ಸರಿದರು, ಸರ್ಕಾರ ಆ ಪಕ್ಷವನ್ನು ಬಹಿಷ್ಕರಿಸಿತು. 1958ರ ವರೆಗೂ ಇದೇ ಸ್ಥಿತಿ ಮುಂದುವರಿಯಿತು. 1952ರಲ್ಲಿ ವೆಡೆಲನ ಸ್ಥಾನದಲ್ಲಿ ಕಾರ್ಲೋಸ್ ಇಬಾನೆeóï ಅಧ್ಯಕ್ಷನಾದ. ಹಿಂದೆ ಸರ್ವಾಧಿಕಾರಿಯಗಿದ್ದ ಈತನ ಆಡಳಿತದ ಕಾಲದಲ್ಲಿ ಅತೃಪ್ತಿ ಅಧಿಕವಾಯಿತು. 1958ರಲ್ಲಿ ಜಾರ್ಜ್ ಅಲೆಸಾಂಡ್ರಿ ಅಧ್ಯಕ್ಷನಾದ. ಅಮೆರಿಕದೊಂದಿಗೆ ಸ್ನೇಹ ಬೆಳೆಯಿತು. ಜನರ ಒಲವು ವಾಮ ಪಕ್ಷಗಳ ಕಡೆಗೆ ಬೆಳೆಯುತ್ತಿತ್ತು. 1964ರಲ್ಲಿ ಎಡ್ವರ್ಡೊ ಫ್ರೈ ಅಧ್ಯಕ್ಷನಾದ.

1970ರಲ್ಲಿ ವಾಮಪಕ್ಷಗಳ ಬೆಂಬಲದಿಂದ ಸಾಲ್ವಡಾರ್ ಅಲೆಂಡೆ ಅಧ್ಯಕ್ಷರಾಗಿ ಚುನಾಯಿತರಾದರು. ಅವರು ಚಿಲಿಯ ಪ್ರಥಮ ಸಮಾಜವಾದಿ ಅಧ್ಯಕ್ಷ ಮತ್ತು ಕಮ್ಯುನಿಸಮ್ ಪ್ರತಿಪಾದಕ. ಅಮೆರಿಕದ ಹಿತಾಸಕ್ತಿಗಳ ಹಿಡಿತದಿಂದ ಚಿಲಿಯನ್ನು ವಿಮೋಚನೆಗೊಳಿಸಲು ಅನೇಕ ಸಾಮಾಜಿಕ ಸುಧಾರಣೆಗಳನ್ನು ಜಾರಿಗೆ ತಂದರು. ಅವುಗಳಲ್ಲಿ ಮುಖ್ಯವಾದುವೆಂದರೆ ಕಾರ್ಮಿಕರ ಕನಿಷ್ಠ ವೇತನದ ಏರಿಕೆ, ಸಮಾನ ಕೆಲಸಕ್ಕೆ ಸಮಾನ ವೇತನ, ಕೆಲಸ-ವೇತನಗಳ ವಿಚಾರದಲ್ಲಿ ಸ್ತ್ರೀಪುರುಷರೆಂಬ ತಾರತಮ್ಯದ ಅಂತ್ಯ, ಆಹಾರ ಸ್ವಾವಲಂಬನೆಗಾಗಿ ಭೂಸುಧಾರಣೆ. ತಾಮ್ರದ ಗಣಿಗಳೂ ಸೇರಿದಂತೆ ಎಲ್ಲ ಮೂಲ ಕೈಗಾರಿಕೆಗಳನ್ನೂ ಅವರು ರಾಷ್ಟ್ರೀಕರಣ ಮಾಡಿದರು. ಈ ಕಾರ್ಯಕ್ರಮಗಳು ಅಮೆರಿಕನ್ ಸರ್ಕಾರಕ್ಕೆ ಸರಿದೋರಲಿಲ್ಲ. ಪಟ್ಟಭದ್ರರ ವಿರೋಧಿಯಾಗಿದ್ದ ಅವರಿಗೆ ಅಧಿಕಾರದ ಆರಂಭದಿಂದಲೂ ಕಿರುಕುಳವಿತ್ತು.1973ರ ಸೆಪ್ಟಂಬರ್ 11 ರಂದು ಅಗಸ್ಟೊ ಪಿನೊಚೆಟ್ ನಾಯಕತ್ವದಲ್ಲಿ ನಡೆದ ಸೇನಾಬಂಡಾಯ ಅವರ ಸರ್ಕಾರವನ್ನು ಉರುಳಿಸಿತು. ಅಲೆಂಡೆ ಸಾವನಪ್ಪಿದರು.			(ಎಚ್.ವಿ.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ